ಕೊಳ್ಳೇಗಾಲ(ಚಾಮರಾಜನಗರ): ಸೂರಿಲ್ಲದೇ ಪರದಾಡುತ್ತಿದ್ದ ಈ ಬಡಪಾಯಿಗಳ ಕುಟುಂಬಕ್ಕೆ ತಹಶೀಲ್ದಾರ್ ಕುನಾಲ್ ನೆರವಿನ ಹಸ್ತ ಚಾಚಿದ್ದಾರೆ. ತಾತ್ಕಾಲಿಕ ವಸತಿ, ಆಹಾರ ಪದಾರ್ಥ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.
ಲಾಕ್ಡೌನ್ನಿಂದ ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಅಲೆಮಾರಿಗಳಂತೆ ಅಲೆಯುತ್ತಿದ್ದ ಈ ಕುಟುಂಬ ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಈ ಕುರಿತು ಏ.21 ರಂದು ನಿರ್ಗತಿಕ ಕುಟುಂಬಕ್ಕೆ ಲಾಕ್ಡೌನ್ ಬರೆ: ಮಂಕಾಗಿದೆ ಮಕ್ಕಳ ಭವಿಷ್ಯ ಎಂಬ ಶೀರ್ಷಿಕೆಯೊಂದಿಗೆ ನಮ್ಮ ‘ಈಟಿವಿ ಭಾರತ’ನಲ್ಲಿ ವಿಸ್ತೃತ ವರದಿ ಬಿತ್ತರಿಸಲಾಗಿತ್ತು.
ನಿರ್ಗತಿಕ ಕುಟುಂಬಕ್ಕೆ ಲಾಕ್ಡೌನ್ ಬರೆ: ಮಂಕಾಗಿದೆ ಮಕ್ಕಳ ಭವಿಷ್ಯ
ಮೈಸೂರಿನಿಂದ ಕೆಲಸ ಅರಸಿ ಕುಟುಂಬ ಸಮೇತ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮಕ್ಕೆ ಬಂದಿದ್ದ ಕೂಲಿ ಕಾರ್ಮಿಕ ರಾಜು ಕುಟುಂಬ ಲಾಕ್ಡೌನ್ನಿಂದ ಅಕ್ಷರಶಃ ಕಂಗಾಲಾಗಿ ಬೀದಿಗೆ ಬಿದ್ದಿತ್ತು. ಅವರ ಕಷ್ಟದ ಬದುಕಿನ ಕುರಿತು ವರದಿ ಪ್ರಕಟಿಸಲಾಗಿತ್ತು.
ನಾಲ್ಕು ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕೆಂಬ ಪಾಲಕರ ಆಸೆಗೆ ತಾಲೂಕು ಆಡಳಿತ ಸ್ಪಂದಿಸಿದೆ. ರಾಜು ಮತ್ತು ಆತನ ಪತ್ನಿ, ಮ್ಕಳಿಗೆ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಶಾಶ್ವತ ಸೂರಿನ ವ್ಯವಸ್ಥೆ ಮಾಡಲು ಗ್ರಾಮ ಪಂಚಾಯತ್ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದು ತಹಶೀಲ್ದಾರ್ ಕುನಾಲ್ ಭರವಸೆ ನೀಡಿದ್ದಾರೆ.
ಈಟಿವಿ ಭಾರತ ವರದಿ ನೋಡಿ ಬಡಪಾಯಿಗಳ ಕಷ್ಟಕ್ಕೆ ಮಿಡಿದಿರುವ ತಹಶೀಲ್ದಾರ್ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಅವರ ಈ ಮಾನವೀಯ ಕಾರ್ಯ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇವೆ.