ಚಾಮರಾಜನಗರ: ವಿಷ ಪ್ರಸಾದ ದುರಂತದ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಹನೂರು ತಾಲೂಕಿನ ಸುಳ್ವಾಡಿಯಲ್ಲಿರುವ ಕಿಚ್ಚುಗುತ್ತಿ ಮಾರಮ್ಮನ ದೇಗುಲ ಅಕ್ಟೋಬರ್ 20ರಿಂದ ಪುನರಾರಂಭವಾಗುತ್ತಿದೆ.
ಹನೂರು ಶಾಸಕ ಆರ್.ನರೇಂದ್ರ ವಿಧಾನಸಭಾ ಕಲಾಪದಲ್ಲಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯವು ಕಳೆದ 2 ವರ್ಷಗಳಿಂದ ಮುಚ್ಚಿದ್ದು, ಇದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದ್ದರು. ಇದಕ್ಕೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉತ್ತರ ನೀಡಿದ್ದು, ಆಗಮ ಪಂಡಿತರ ಸಲಹೆ ಮೇರೆಗೆ ಅಕ್ಟೋಬರ್ 20ರಂದು ದೇಗುಲವನ್ನು ತೆರೆಯಲು ದಿನಾಂಕ ನಿಶ್ಚಯವಾಗಿದೆ. ವಿಧಿ-ವಿಧಾನಗಳೊಂದಿಗೆ ಪ್ರಾಯಶ್ಚಿತ್ತ ಪೂಜೆ, ಹೋಮ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ದುರಂತದ ಹಿನ್ನೆಲೆ: 2018ರ ಡಿಸೆಂಬರ್ 14ರಂದು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಗೋಪುರ ನಿರ್ಮಾಣದ ಗುದ್ದಲಿ ಪೂಜೆಯಲ್ಲಿ ವಿತರಿಸಿದ ವಿಷಮಿಶ್ರಿತ ಪ್ರಸಾದ ಸೇವಿಸಿ 124 ಮಂದಿ ಅಸ್ವಸ್ಥರಾಗಿ 17 ಮಂದಿ ಅಸುನೀಗಿದ್ದರು. ಪ್ರಕರಣ ಸಂಬಂಧ ಸಾಲೂರು ಮಠದ ಕಿರಿಯ ಸ್ವಾಮೀಜಿ ಸೇರಿದಂತೆ ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನಲ್ಲಿದ್ದು, ಸುಪ್ರೀಂ ಕದ ತಟ್ಟಿದ್ದರೂ ಸ್ವಾಮೀಜಿಗೆ ಜಾಮೀನು ಸಿಕ್ಕಿಲ್ಲ.