ಚಾಮರಾಜನಗರ: ತಮ್ಮ ರಾಜೀನಾಮೆಗೆ ಒತ್ತಾಯಿಸಿ ಬುಧವಾರ ಸ್ವಪಕ್ಷೀಯರಾದ ಕಾಂಗ್ರೆಸ್ ಸದಸ್ಯರೇ ಸಾಮಾನ್ಯ ಸಭೆಯಲ್ಲಿ ಪ್ರತಿಭಟಿಸಿದ ಘಟನೆ ಸಂಬಂಧ ಇಂದು ಜಿ.ಪಂ.ಅಧ್ಯಕ್ಷೆ ಶಿವಮ್ಮ ಕೃಷ್ಣ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ತಮ್ಮ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಬಿಡುಗಡೆಯಾಗಿದ್ದ ಅನುದಾನ ಮತ್ತು ನೀಡಬೇಕಿದ್ದ ಗೌರವಧನ ಬರದಿದ್ದರಿಂದ ರಾಜೀನಾಮೆ ವಾಪಾಸ್ ಪಡೆದಿರುವುದಾಗಿ ಅವರು ತಿಳಿಸಿದರು. ಪಕ್ಷದ ಆಂತರಿಕ ಒಪ್ಪಂದದಂತೆ ನಾನು ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ಆದರೆ, ಸ್ವಪಕ್ಷೀಯ ಸದಸ್ಯರೇ ರಾಜಕೀಯ ಮಾಡಿ ಗೌರವಧನ ತಡೆಹಿಡಿಸಿ, ಬಿಡುಗಡೆಯಾಗಿದ್ದ ಅನುದಾನಕ್ಕೂ ಕತ್ತರಿ ಹಾಕಲು ಮುಂದಾಗಿದ್ದರಿಂದ ಹನೂರು ಶಾಸಕ ಆರ್.ನರೇಂದ್ರ, ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಗಮನಕ್ಕೆ ತಂದು ಕೊಟ್ಟಿದ್ದ ರಾಜೀನಾಮೆಯನ್ನು ವಾಪಾಸ್ ಪಡೆದೆ. ಮೂರು ದಿನದ ಹಿಂದೆ ಗೌರವಧನ ಬಂದಿದ್ದು, ಮಾರ್ಚ್ 2ರಂದು ರಾಜೀನಾಮೆ ನೀಡುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿ,ತನ್ನ ಅವಧಿಯ ಕೊನೆ ಸಾಮಾನ್ಯ ಸಭೆಯನ್ನು ಬುಧವಾರ ಕರೆದಿದ್ದೆ. ಆದರೆ, ನನ್ನ ವಿರುದ್ದ ಪಕ್ಷದ ಸದಸ್ಯರೇ ಹೀನಾಯವಾಗಿ ನಡೆದುಕೊಂಡರು ಎಂದು ಅಸಮಾಧಾನ ಹೊರಹಾಕಿದದರು.
ನನ್ನ ಅವಧಿಯಲ್ಲಿ ಅನುದಾನವನ್ನು ಸಮರ್ಪಕವಾಗಿ ಬಳಸಿದ್ದು,ನನ್ನ ಕ್ಷೇತ್ರಕ್ಕಿಂತ ಹೆಚ್ಚಿನ ಹಣ ಇತರೆ ಕ್ಷೇತ್ರಗಳಿಗೆ ನೀಡಿದ್ದೇನೆ. ಮಾ.2 ಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವರಿಷ್ಠರಿಗೆ ತಿಳಿಸಿದ್ದೇನೆ. ವರಿಷ್ಠರು ಕೈಗೊಳ್ಳುವ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ ಎಂದರು. ಇದೇ ವೇಳೆ, ಜಿ.ಪಂ.ನೂತನ ಉಪಾಧ್ಯಕ್ಷ ಕಬ್ಬಹಳ್ಳಿ ಮಹೇಶ್ ತನಗೆ ಕಾರ್ಯ ನಿರ್ವಹಿಸಲು ಬಿಡದೆ,ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅನುದಾನ ಬಳಕೆಗೂ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಏನಿದು ಕಿತ್ತಾಟ: ಚಾಮರಾಜನಗರ ಜಿ.ಪಂ.ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು,ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ಎಲ್ಲರಿಗೂ ಅಧಿಕಾರ ಹಂಚಿಕೆಯಾಗಲೆಂದು ಆಯ್ಕೆಯಾಗಿರುವ ಮೂವರು ಪಟ್ಟಣ ಪಂಚಾಯಿತಿ ಸದಸ್ಯರು, ತಲಾ 20 ತಿಂಗಳು ಅಧ್ಯಕ್ಷಗಿರಿ ಪಡೆಯಬೇಕೆಂಬುದು ಆಂತರಿಕ ಒಪ್ಪಂದವಾಗಿತ್ತು. ಇದರಂತೆ, ಎರಡನೇ ಅವಧಿಯಲ್ಲಿ ಅಧ್ಯಕ್ಷರಾದ ಶಿವಮ್ಮ ಕೃಷ್ಣ ತಮ್ಮ ಅವಧಿ ಮುಗಿದು ಎರಡು ತಿಂಗಳಾದರೂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡದಿರುವುದರಿಂದ ಇತರೆ ಕಾಂಗ್ರೆಸ್ ಸದಸ್ಯರಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ಸತಾಯಿಸಿ ಸತಾಯಿಸಿ ಕಳೆದ ತಿಂಗಳು ರಾಜೀನಾಮೆ ನೀಡಿ,ಎರಡೇ ದಿನಕ್ಕೆ ವಾಪಾಸ್ ಪಡೆದಿದ್ದು, ಉಳಿದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಬುಧವಾರ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಶಿವಮ್ಮ ಕೃಷ್ಣ ರಾಜೀನಾಮೆಗೆ ಒತ್ತಾಯಿಸಿ,ಕಾಂಗ್ರೆಸ್ ಸದಸ್ಯರೇ ಪ್ರತಿಭಟಿಸಿ, ಅಧ್ಯಕ್ಷೆ ನಡೆ ವಿರುದ್ಧ ಕಿಡಿಕಾರಿದ್ದರು. ಅಧ್ಯಕ್ಷ ಆಕಾಂಕ್ಷಿಯಾಗಿರುವ ಬೊಮ್ಮಲಾಪುರದ ಅಶ್ವಿನಿ ವಿಶ್ವನಾಥ್ ಪ್ರತಿಭಟನೆಯಲ್ಲಿ ವಾಚಾಮಗೋಚರವಾಗಿ ಬೈದಾಡಿ ಕಿಡಿಕಾರಿದ್ದರು.