ಚಾಮರಾಜನಗರ: ವಿಶ್ವ ವಿಖ್ಯಾತ ಮೈಸೂರು ದಸರಾದ ಸರಳ ಆಚರಣೆಯಂತೆ ಚಾಮರಾಜನಗರ ಜಿಲ್ಲಾ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ ಮಾತನಾಡಿ, ಎಲ್ಲರೂ ಒಮ್ಮತವಾಗಿ ಹೆಚ್ಚು ಜನರು ಪಾಲ್ಗೊಳ್ಳುವ ಕಾರ್ಯಕ್ರಮ ಮಾಡುವುದು ಸೂಕ್ತವಲ್ಲ ಎಂಬುದು ವ್ಯಕ್ತವಾಗಿದೆ. ಹೀಗಾಗಿ, ಈ ಬಾರಿ ಸಾಂಪ್ರದಾಯಿಕವಾಗಿ ದಸರಾ ಆಚರಿಸೋಣ, ಕೊರೊನಾ ಮುಕ್ತವಾದ ನಂತರ ವೈಭವದಿಂದ ಮುಂದಿನ ಬಾರಿ ದಸರಾ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.
ವರ್ಚ್ಯುಯಲ್ ಮೂಲಕ ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಆವರಣದೊಳಗೆ ಹಮ್ಮಿಕೊಂಡು ಜನರಿಗೆ ತಲುಪಿಸಬಹುದೆ ಎಂಬ ಬಗ್ಗೆಯು ಚಿಂತನೆ ನಡೆಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಭೆ ಅನುಮತಿಸಿದೆ. ಮನೆ ಮನೆ ದಸರಾ ಮೂಲಕ ಬಹುಮಾನ, ಪ್ರಮಾಣ ಪತ್ರ ವಿತರಣೆ ಮಾಡಬಹುದೆ ಎಂಬ ಬಗ್ಗೆಯೂ ಚಿಂತಿಸಬಹುದು. ಆದರೆ ನಗರದಲ್ಲಿ ದೀಪಾಲಂಕಾರ ಈ ಹಿಂದಿನಂತೆ ಇರಲಿ. ಎಲ್ಲರ ಅಭಿಪ್ರಾಯದಂತೆ ದಸರಾ ಸರಳ ಆಚರಣೆ ಇರಲಿ ಎಂದರು.
ಡಿಸಿ ಡಾ.ಎಂ.ಆರ್.ರವಿ ಮಾತನಾಡಿ, ನಗರದ ಪ್ರಮುಖ ರಸ್ತೆ, ಉದ್ಯಾನವನಗಳಿಗೆ ದೀಪಾಲಂಕಾರಕ್ಕಾಗಿ ಮುಂದೆ ಬರುವ ಪ್ರಾಯೋಜಕರೊಂದಿಗೆ ಸಮಾಲೋಚಿಸಲಾಗುವುದು, ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ಪೂಜೆ-ಪುನಸ್ಕಾರಕ್ಕಾಗಿ ತಿಳಿಸಲಾಗುವುದು ಎಂದರು.