ಕೊಳ್ಳೇಗಾಲ (ಚಾಮರಾಜನಗರ): ದ್ವಿಚಕ್ರ ವಾಹನವೊಂದರಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ದನುರ್ಮಾಸ ಪ್ರಯುಕ್ತ ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಶೋಭಾ ಎಂಬುವರು ತಮ್ಮ ಮನೆಯ ಸಮೀಪದ ಶ್ರೀ ಗಣಪತಿ ದೇವಸ್ಥಾನಕ್ಕೆ ದನುರ್ಮಾಸ ಪೂಜೆಗೆಂದು ಬೆಳಗ್ಗೆ 5.40ರ ಸಮಯದಲ್ಲಿ ಹೊರಟಿದ್ದರು. ಮಹಿಳೆ ಒಂಟಿಯಾಗಿ ಹೋಗುತ್ತಿರುವುದನ್ನ ಗಮನಿಸಿದ ಖದೀಮರು, ದ್ವಿಚಕ್ರ ವಾಹನದಲ್ಲಿ ಬಂದು 65 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಘಟನೆ ಸಂಭವಿಸಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.