ಚಾಮರಾಜನಗರ: ವಿವಿಧ ಕಾರಣಗಳ ನೆಪವೊಡ್ಡಿ ರಾಜೀನಾಮೆ ನೀಡದೇ ಸ್ವಪಕ್ಷಿಯರ ಕೆಂಗಣ್ಣಿಗೆ ಗುರಿಯಾಗಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕೃಷ್ಣ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
![Resignation of District Panchayat President](https://etvbharatimages.akamaized.net/etvbharat/prod-images/6311289_thucnr.jpg)
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಮೀಸಲಿದ್ದು, ಕಾಂಗ್ರೆಸ್ ಪಕ್ಷದ ಆಂತರಿಕ ಒಪ್ಪಂದದಂತೆ ಮೂವರಿಗೆ ತಲಾ 20 ತಿಂಗಳಂತೆ ಅಧಿಕಾರ ಹಂಚಿಕೆಯಾಗಿತ್ತು. ಆದರೆ, ಶಿವಮ್ಮ ಕೃಷ್ಣ ಅವಧಿ ಮುಗಿದು 3 ತಿಂಗಳಾದರೂ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ .
ಗೌರವ ಧನ ತನಗಿನ್ನೂ ಬಂದಿಲ್ಲವೆಂದು, ಕಳೆದ ತಿಂಗಳು ನೀಡಿದ್ದ ರಾಜೀನಾಮೆಯನ್ನು ವಾಪಾಸ್ ಪಡೆದು ಆಕ್ರೋಶ ಭುಗಿಲೇಳುವಂತೆ ಮಾಡಿದ್ದರು. ರಾಜೀನಾಮೆ ಸಂಬಂಧ ಶಿವಮ್ಮ ಕೃಷ್ಣ ಪ್ರತಿಕ್ರಿಯೆಗೆ ಸಿಗಲಿಲ್ಲ. ಆದರೆ, ರಾಜೀನಾಮೆ ಕೊಟ್ಟಿರುವ ವಿಚಾರವನ್ನು ದೂರವಾಣಿ ಮೂಲಕ ಹನೂರು ಶಾಸಕ ಆರ್.ನರೇಂದ್ರ ಖಚಿತ ಪಡಿಸಿದ್ದಾರೆ.
ಶಿವಮ್ಮ ರಾಜೀನಾಮೆ ನೀಡಿದ್ದು, ತೆರಕಣಾಂಬಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಬೊಮ್ಮಲಾಪುರ ಅಶ್ವಿನಿ ವಿಶ್ವನಾಥ್ ಮುಂದಿನ ಅವಧಿಯ ಅಧ್ಯಕ್ಷರಾಗಲಿದ್ದಾರೆ.