ಚಾಮರಾಜನಗರ : ಆ್ಯಂಬುಲೆನ್ಸ್ ಇಲ್ಲದೇ ಸೋಂಕಿತನ ಶವ ಸಾಗಿಸಲು ಕುಟುಂಬಸ್ಥರು 5 ತಾಸು ಕಾದು ಕುಳಿತ ಘಟನೆ ಇಂದು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಶ್ಯಾನಡ್ರಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಕೊರೊನಾದಿಂದಾಗಿ ಇಂದು ಬೆಳಗ್ಗೆ ಮೃತಪಟ್ಟಿದ್ದರು. ಶವ ಕೊಂಡೊಯ್ಯಲು ಮಧ್ಯಾಹ್ನ 12ರ ವೇಳೆಗೆ ಆಸ್ಪತ್ರೆ ಸಿಬ್ಬಂದಿ ಶವಾಗಾರದ ಮುಂದೆ ಮೃತದೇಹ ತಂದಿರಿಸಿದ್ದಾರೆ. ಆದರೆ, ಆ್ಯಂಬುಲೆನ್ಸ್ ಇಲ್ಲದ ಕಾರಣ ಸಂಜೆ 4ವರೆಗೂ ಕಾದು ಕಾದು ಹೈರಾಣಾಗಿದ್ದಾರೆ.
ಮತ್ತೋರ್ವ ಸೋಂಕಿತನ ಶವ ತೆಗೆದುಕೊಂಡು ಹೋಗಿದ್ದ ಆ್ಯಂಬುಲೆನ್ಸ್ ಮಾರ್ಗ ಮಧ್ಯೆ ಕೆಟ್ಟು ನಿಂತಿದ್ದೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ಕೊನೆಗೆ ಸಂಬಂಧಿಕರ ಆಕ್ರೋಶ ತಿಳಿದು ಸ್ಥಳಕ್ಕೆ ಬಂದ ಗುಂಡ್ಲುಪೇಟೆ ತಹಶೀಲ್ದಾರ್, ಬದಲಿ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ಅವ್ಯವಸ್ಥೆ : ಚಾಮರಾಜನಗರ ತಾಲೂಕಿನ ಹರವೆಯಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಸ್ವಚ್ಛತೆ ಇಲ್ಲ, ಊಟ ಸರಿಯಿಲ್ಲವೆಂದು ಸೋಂಕಿತರೊಬ್ಬರು ಆಕ್ರೋಶ ಹೊರಹಾಕಿ ವಿಡಿಯೋ ಹರಿಬಿಟ್ಟಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಪತ್ರಕರ್ತರ ಮುಂದೆ ಬಂದಾಗಲೆಲ್ಲಾ ಎಲ್ಲವೂ ಸರಿಯಿದೆ ಎನ್ನುತ್ತಿದ್ದರೇ ಮತ್ತೊಂದೆಡೆ ಸೋಂಕಿತರೇ ಅವ್ಯವಸ್ಥೆಯನ್ನು ಅನಾವರಣ ಮಾಡುತ್ತಿದ್ದಾರೆ.