ಚಾಮರಾಜನಗರ: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು ಜಲಾಶಯಗಳು, ಕೆರೆ ಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರಿನ ಹತ್ತಾರು ಕೆರೆಗಳು ಕೋಡಿ ಬಿದ್ದಿವೆ. ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಬೆಳೆಗಳು ಜಲಾವೃತವಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಪ್ರವಾಹ ಸ್ಥಿತಿ ನಿರ್ಮಾಣ: ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಂದ 1,400 ಕ್ಯೂಸೆಕ್‌ಗಳಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದೆ. ಮರಗದಕೆರೆ, ಕೋಡಿಮೋಳೆ ಕೆರೆ ಸೇರಿದಂತೆ ವಿವಿಧ ಕೆರೆಗಳ ಹೆಚ್ಚುವರಿ ನೀರು ಕೂಡ ಸುವರ್ಣಾವತಿ ನದಿ ಸೇರುತ್ತಿದ್ದು, ಅದರ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಯಳಂದೂರಿನಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮೋಳೆ, ದೊಡ್ಡಮೋಳೆ, ಬ್ಯಾಡಮೂಡ್ಲು ಗ್ರಾಮಗಳಲ್ಲಿ ಕೆರೆಗಳು ಉಕ್ಕಿ ಹರಿದಿರುವುದರಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಮತ್ತೆ ಜಲಾವೃತಗೊಂಡ ರಾಮನಗರ: ಕಾರ್ಮಿಕರ ಆಹಾರ ಸಾಮಗ್ರಿಗಳು ನೀರುಪಾಲು
ಕೊಳ್ಳೇಗಾಲ- ರಾಮಾಪುರ ಮಾರ್ಗದ ರಸ್ತೆ ಬಂದ್: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 3 ದಿನಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಹೂಗ್ಯಂ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ಕೊಳ್ಳೇಗಾಲ- ರಾಮಾಪುರ ಮಾರ್ಗದ ರಸ್ತೆ ಬಂದ್ ಆಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಭಾರಿ ಮಳೆ : ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್, ಅಪಾರ ಬೆಳೆಹಾನಿ
ವಾಹನದ ಮೇಲೆ ಬಿದ್ದ ವಿದ್ಯುತ್ ಕಂಬ: ರಾಮಪುರದಿಂದ ಹೂಗ್ಯಂ ಗ್ರಾಮಕ್ಕೆ ತೆರಳುತ್ತಿದ್ದ ಬೊಲೆರೋ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಭಾರಿ ಮಳೆ ಹಿನ್ನೆಲೆ ವಿದ್ಯುತ್ ನಿಲುಗಡೆ ಆಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇದಲ್ಲದೆ ಹೂಗ್ಯಂ ಮುಖ್ಯರಸ್ತೆಯಲ್ಲಿದ್ದ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರಿಂದ ಕಗ್ಗತ್ತಲಿನಲ್ಲಿ ರಾತ್ರಿ ಕಳೆದಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಲ್ಲೂ ಉತ್ತಮ ಮಳೆಯಾಗುತ್ತಿದ್ದು ಬೇಗೂರು, ಬೆಳಚವಾಡಿ ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ. ಶಾಲೆಗಳ ಆವರಣ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಸಿಡಿಲಿನ ಬಡಿತಕ್ಕೆ ಕಾಲು-ಕೈ ಸ್ವಾಧೀನ ಕಳೆದುಕೊಂಡ ಮಹಿಳೆ: ಸಿಡಿಲಿನ ಹೊಡೆತಕ್ಕೆ ಮಹಿಳೆಯೊಬ್ಬರು ಕಾಲು-ಕೈ ಸ್ವಾಧೀನ ಕಳೆದುಕೊಂಡಿರುವ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆದಿದೆ. ಪೊನ್ನಾಚಿ ಗ್ರಾಮದ ಜಡೆ ಮಾದಮ್ಮ(39) ಸಂತ್ರಸ್ತರು. ಜಮೀನಿನಲ್ಲಿ ಕಳೆ ಕೀಳುತ್ತಿದ್ದ ಇವರು ಮಳೆ ಬಂದಿದ್ದರಿಂದ ಮನೆಗೆ ತೆರಳುವಾಗ ಸಿಡಿಲು ಬಡಿದಿದೆ ಎನ್ನಲಾಗ್ತಿದೆ.
ಸದ್ಯ, ಕೈ-ಕಾಲು ಸ್ವಾಧೀನ ಕಳೆದುಕೊಂಡಿದ್ದು, ಕೊಳ್ಳೇಗಾಲ ಆಸ್ಪತ್ರೆಗೆ ಸಮಾಜಸೇವಕ ರಾಜು ಕರೆದೊಯ್ದು ದಾಖಲಿಸಿದ್ದಾರೆ. ಸಿಡಿಲಿನ ಬಡಿತದಿಂದ ಅದೃಷ್ಟವಶಾತ್ ಜೀವ ಉಳಿದಿದೆ.
ಇದನ್ನೂ ಓದಿ: ರಾತ್ರಿಯಿಡೀ ಸುರಿದ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಜನಜೀವನ ಅಸ್ತವ್ಯಸ್ತ