ಚಾಮರಾಜನಗರ: ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದೆ. ಮನೆಗೋಡೆ ಕುಸಿದು ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ. ದಡದಹಳ್ಳಿ ಗ್ರಾಮದ ಮೂರ್ತಿ(32) ಮೃತ ದುರ್ದೈವಿ.
ಮಲಗಿದ್ದಾಗ ನಿರಂತರ ಮಳೆಯಿಂದಾಗಿ ಮನೆಗೋಡೆ ತಲೆಯ ಮೇಲೆ ಬಿದ್ದು ಸ್ಥಳದಲ್ಲೇ ಮೂರ್ತಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಬೂದಿಪಡಗ ಸೇತುವೆ ಮುಳುಗಡೆ: ಚಾಮರಾಜನಗರ ತಾಲೂಕಿನ ಬೂದಿಪಡಗ ಸೇತುವೆ ಮುಳುಗಡೆಯಾಗಿ ಸೇತುವೆ ಮೇಲೆ 3 ಅಡಿ ನೀರು ನೀರು ಹರಿಯುತ್ತಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ. ಮೊದಲೇ ಮಳೆ ಆರ್ಭಟಕ್ಕೆ ಪಾರ್ಶ್ವಭಾಗ ಕುಸಿತ ಕಂಡಿದ್ದ ಸೇತುವೆ ಇದೀಗ ಮುಳುಗಡೆ ಆಗಿದ್ದು ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಜೊತೆಗೆ, ಸೇತುವೆ ಮೇಲೆ ವಿದ್ಯುತ್ ಕಂಬ ಕೂಡ ಬಿದ್ದಿದ್ದು ಜನರು ಸೇತುವೆ ಬಳಿ ಸುಳಿಯದೇ ಆತಂಕದಲ್ಲಿದ್ದಾರೆ.
ಗ್ರಾಮದಲ್ಲಿ ಕಿತ್ತೂರು ಚೆನ್ನಮ್ಮ, ಆಶ್ರಮ ಶಾಲೆಗಳ ಶಿಕ್ಷಕರು, ಕೂಲಿ ಕಾರ್ಮಿಕರು ಸೇತುವೆ ದಾಟಲಾಗದೇ ನಿಂತಿದ್ದಾರೆ. ಸೇತುವೆಯನ್ನು ದುರಸ್ತಿ ಮಾಡಿ ಎತ್ತರಿಸದಿದ್ದರೆ ಮಳೆ ಬಂದಾಗಲೆಲ್ಲ ಇದೇ ಗೋಳು ಮುಂದುವರೆಯಲಿದ್ದು ಸೇತುವೆ ದುರಸ್ತಿಪಡಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆರೆಯಂತಾದ ಬೇಗೂರು ಠಾಣೆ: ನಿರಂತರವಾಗಿ ರಾತ್ರಿ ಸುರಿದ ಮಳೆಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆ ಕೆರೆಯಂತಾಗಿದೆ. ಪೊಲೀಸ್ ಜೀಪ್‌ಗಳು ಕೆರೆಯಲ್ಲಿ ನಿಂತಂತೆ ಕಾಣುತ್ತಿವೆ. ರಾಷ್ಟ್ರೀಯ ಹೆದ್ದಾರಿ ಮೇಲೆಲ್ಲ ನೀರು ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಜನರ ಪರದಾಟ: ಕೆಲವು ದಿನಗಳ ಹಿಂದಷ್ಟೇ 26 ವರ್ಷಗಳ ಬಳಿಕ ಕೋಡಿಬಿದ್ದು ಉಕ್ಕಿದ್ದ ಚಾಮರಾಜನಗರ ತಾಲೂಕಿನ ಮಾಲೆಗೆರೆ ಇಂದೂ ಕೂಡ ಮತ್ತೆ ಬೋರ್ಗರೆಯುತ್ತಿದೆ. ಕೆರೆ ತುಂಬಿ ರಭಸದಿಂದ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸಂಪರ್ಕ ಸೇತುವೆ ಮೇಲೆ ಕಾಲಿಡಲಾಗದ ಪರಿಸ್ಥಿತಿಯಿದೆ. ಮಾಲೆಗೆರೆ ನೀರಿನಿಂದಾಗಿ ಕಾಳನಹುಂಡಿ, ಕಲ್ಪುರ, ಹಳೇಪುರ ಸೇರಿದಂತೆ ಇನ್ನಿತರೆ ಗ್ರಾಮದಲ್ಲಿ ಜನರು, ಶಾಲಾ ಮಕ್ಕಳು ಸಂಪರ್ಕ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ರಾತ್ರಿ ಸುರಿದ ಮಳೆಗೆ ಗಡಿಜಿಲ್ಲೆ ಚಾಮರಾಜನಗರ ತತ್ತರ: ಗ್ರಾಮಗಳು ಜಲಾವೃತ