ಚಾಮರಾಜನಗರ: ಇಂದು ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ಫೇಲಾಗಿದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಹಾಸ್ಟೆಲ್ವೊಂದರಲ್ಲಿ ನಡೆದಿದೆ. ಗುಂಡ್ಲುಪೇಟೆ ಮೂಲದ ವಿಜಯಲಕ್ಷ್ಮಿ ಮೃತ ದುರ್ದೈವಿ. ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ನಾಲ್ಕು ವಿಷಯಗಳು ಫೇಲಾಗಿದ್ದರಿಂದ ತೀವ್ರ ಮನನೊಂದು ಹಾಸ್ಟೆಲ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚಾಮರಾಜನಗರ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿಯೂ ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದು ಕೊಂಡಿದೆ. 2022 ರಲ್ಲಿ 88.02 ಫಲಿತಾಂಶ ಪಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಶೇ 95.33ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ.
ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿ ಟಾಪರ್: ಕಲಾ ವಿಭಾಗ (ಆರ್ಟ್ಸ್)ದಲ್ಲಿ ಒಬ್ಬ ವಿದ್ಯಾರ್ಥಿನಿ ಟಾಪರ್ ಆಗಿದ್ದಾರೆ. ಪುತ್ತೂರಿನ ವಿವೇಕಾನಂದ ಪಿ ಯು ಕಾಲೇಜಿನ ಮಂಜುಶ್ರೀ 591 ಅಂಕ ಪಡೆಯುವ ಮೂಲಕ ಆರ್ಟ್ಸ್ ವಿಭಾಗದಲ್ಲಿ ಟಾಪರ್ ಆಗಿದ್ದಾರೆ. ಮಂಜುಶ್ರೀ ತೀರ್ಥರಾಮ ಮತ್ತು ಸಂಧ್ಯಾ ಅವರ ಪುತ್ರಿಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 6 ಮಂದಿ ಟಾಪರ್: ವಾಣಿಜ್ಯ ವಿಭಾಗ (ಕಾಮರ್ಸ್)ದಲ್ಲಿ ಆರು ಮಂದಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮೂಡಬಿದಿರೆ ಆಳ್ವಾಸ್ ಪಿ ಯು ಕಾಲೇಜಿನ ಅನನ್ಯ 600ಕ್ಕೆ 600 ಪೂರ್ಣ ಅಂಕ ಪಡೆಯುವ ಮೂಲಕ ಕೇವಲ ಟಾಪರ್ ಅಲ್ಲದೇ ಇಡೀ ರಾಜ್ಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಅಶೋಕ್ ಕೆ ಇ ಮತ್ತು ನಳಿನಿ ಅವರ ಪುತ್ರಿಯಾಗಿದ್ದಾರೆ.
ವಿಜ್ಞಾನ ವಿಭಾಗದಿಂದ ಇಬ್ಬರು ಟಾಪರ್ಸ್: ವಿಜ್ಞಾನ ವಿಭಾಗದಲ್ಲಿ ಅಳಿಕೆಯ ಸತ್ಯಸಾಯಿ ಲೋಕಸೇವಾ ಪಿ ಯು ಕಾಲೇಜಿನ ಯೋಗೇಶ್ ತುಕರಾಮ ಬಡಚಿ 594 ಅಂಕ ಪಡೆದಿದ್ದಾರೆ. ಇವರು ತುಕರಾಮ್ ಬಡಚಿ ಮತ್ತು ಪುಷ್ಪ ಬಡಚಿ ಅವರ ಪುತ್ರರಾಗಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಪ್ರಚಿತಾ ಎಂ 594 ಅಂಕ ಪಡೆದಿದ್ದಾರೆ. ಇವರು ಮಲ್ಲೇಶ ಎಂ ಎಂ ಮತ್ತು ಜ್ಯೋತಿ ಎಸ್ ಆರ್ ಅವರ ಪುತ್ರಿಯಾಗಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ, ಜಿಲ್ಲೆಯಲ್ಲಿ 9 ವಿದ್ಯಾರ್ಥಿಗಳು ಟಾಪರ್
ಬಾಲಕಿಯರೇ ಮೇಲುಗೈ: ಕರ್ನಾಟಕ ರಾಜ್ಯ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೇ, ಕೊಡಗು ಮೂರನೇ ಸ್ಥಾನ, ಉತ್ತರ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿದೆ. ಬಾಲಕಿಯರ ಒಟ್ಟಾರೆ ಫಲಿತಾಂಶ ಶೇ.80.25 ಇದ್ದರೆ, ಬಾಲಕರ ಒಟ್ಟಾರೆ ಫಲಿತಾಂಶ ಶೇ.69.05 ರಷ್ಟಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಫಸ್ಟ್, ಯಾದಗಿರಿ ಲಾಸ್ಟ್