ಕೊಳ್ಳೇಗಾಲ (ಚಾಮರಾಜನಗರ): ತಾಲೂಕಿನ ವಿವಿಧ ಗ್ರಾಮದ ನಾಯಕ ಸಮುದಾಯದ ಜನರು ಹಥ್ರಾಸ್ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ದೊಡ್ಡನಾಯಕರ ಬೀದಿಯಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಸರ್ಕಾರ ಹಾಗೂ ಉತ್ತರ ಪ್ರದೇಶದ ಆದಿತ್ಯನಾಥ್ ವಿರುಧ್ಧ ದಿಕ್ಕಾರಕೂಗುತ್ತ ಸಾಗಿ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ್ ಕುನಾಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಾಯಕ ಸಮುದಾಯದ ಹಿರಿಯ ಮುಖಂಡ ಪಾಳ್ಯ ಕೃಷ್ಞ ಮಾತನಾಡಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸಂವಿಧಾನ ವಿರೋಧಿಯಾಗಿದೆ. ಅತ್ಯಾಚಾರ ಮಾಡಿದ ಆರೋಪಿಗಳ ವಿರುದ್ಧ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ತೋರುತ್ತಿದೆ. ಆರೋಪಿಗಳಿಗೆ ಬೆಂಬಲ ನೀಡುತ್ತಿದೆ. ಕುಟುಂಬಕ್ಕೆ ಸಂತ್ರಸ್ತೆಯ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡದೇ ಪೊಲೀಸರಿಂದ ಮೃತದೇಹವನ್ನು ಸುಟ್ಟು ಹಾಕಿಸಿರುವುದು ಸಾಕ್ಷಿನಾಶ ಮಾಡುವ ಹುನ್ನಾರ ಎಂದು ಆರೋಪಿಸಿದರು.
ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ತುಟ್ಟಿಬಿಚ್ಚದೇ ಇರುವುದನ್ನು ನಮ್ಮನಾಯಕ ಸಮುದಾಯ ಖಂಡಿಸುತ್ತದೆ. ಹೈದರಾಬಾದ್ ಅತ್ಯಾಚಾರ ಪ್ರಕರಣದಲ್ಲಿ ಆತ್ಯಾಚಾರಿಗಳಿಗೆ ನೀಡಿದ ಗುಂಡಿನ ಶಿಕ್ಷೆಯಂತೆ ಹಥ್ರಾಸ್ ಪ್ರಕರಣದ ನಾಲ್ಕು ಆರೋಪಿಗಳನ್ನು ಸಾರ್ವಜನಿಕವಾಗಿ ಗುಂಡಿಗೆ ಬಲಿ ಮಾಡಬೇಕು. ಇಲ್ಲವಾದರೆ ದೇಶಾದ್ಯಂತ ನಾಯಕ ಸಮುದಾಯ ದಂಗೆ ಹೇಳುತ್ತದೆ ಎಂದು ಎಚ್ಚರಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೊಪ್ಪಳಿ ನಾಯ್ಕ ಮಾತನಾಡಿ, ಹಥ್ರಾಸ್ನಲ್ಲಿ ಸಂತ್ರಸ್ತೆಯ ಮೇಲೆ ಕ್ರೂರವಾಗಿ ಅತ್ಯಾಚಾರವೆಸಗಿದ ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ನಮ್ಮ ತಾಲೂಕು ನಾಯಕ ಸಮುದಾಯ ಒತ್ತಾಯಿಸುತ್ತದೆ. ಉತ್ತರ ಪ್ರದೇಶದ ಸರ್ಕಾರ ಗಂಭೀರವಾಗಿ ಈ ಪೈಶಾಚಿಕ ಕೃತ್ಯವನ್ನು ಪರಿಗಣಿಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.