ಕೊಳ್ಳೇಗಾಲ (ಚಾಮರಾಜನಗರ): ಕೆಲ ದಿನಗಳಿಂದ ಕಾಣೆಯಾಗಿದ್ದ ತಾಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸಿ ಶಿವಮ್ಮ ಎಂಬಾಕೆಯ ಶವ ಬಾವಿಯಲ್ಲಿ ಪತ್ತೆಯಾದ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಶಿವು, ರಾಜು ಎಂಬುವರನ್ನು ಬಂಧಿಸಿದ್ದು ವಿಚಾರಣೆ ನಡೆಯುತ್ತಿದೆ.
ಘಟನೆ ವಿವರ
ಕೆಲ ವರ್ಷಗಳ ಹಿಂದೆ ಶಿವಮ್ಮ ನೆರೆ ಮನೆಯವರಾದ ನಂಜಮಣಿ ಎಂಬುವರಿಗೆ 1 ಲಕ್ಷ ರೂ. ಸಾಲ ನೀಡಿದ್ದರಂತೆ. ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದಾಗ ಪದೇ ಪದೆ ನೆಪ ಹೇಳುತ್ತಿದ್ದರು ಎನ್ನಲಾಗಿದ್ದು, ಮೂರು ದಿನಗಳ ಹಿಂದೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಕಾಲಿಗೆ ಕಲ್ಲು ಕಟ್ಟಿ ಗ್ರಾಮದ ಬಾವಿಗೆ ಬಿಸಾಡಿದ್ದಾರೆ ಎನ್ನಲಾಗಿದೆ.
ಇಂದು ಬಾವಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾಲ ಪಡೆದಿದ್ದ ನಂಜಮಣಿ ಎಂಬುವರ ಮಗ ಶಿವು ಹಾಗೂ ಸ್ನೇಹಿತ ರಾಜು ಎಂಬುವವರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಕುಟುಂಬಸ್ಥರು ದೂರು ನೀಡಿದ್ದರು.
ಇದನ್ನೂ ಓದಿ: ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ: ಸಾಲ ಪಡೆದವರೇ ಕೊಂದಿರುವ ಶಂಕೆ..!