ಚಾಮರಾಜನಗರ: ಹತ್ತಾರು ವರ್ಷಗಳಿಂದ ಬೆವರು ಸುರಿಸಿ ಉತ್ತು-ಬಿತ್ತುತ್ತಿದ್ದ ಭೂಮಿಯನ್ನು ನಿಮ್ಮದಲ್ಲ ಎಂದು ಕಂದಾಯ ಅಧಿಕಾರಿಗಳು ಕಿರುಕುಳ ಹೇಳುತ್ತಿದ್ದಾರೆ. ಬೇಡಿಕೆ ಇಟ್ಟಿದ್ದ ₹ 3 ಲಕ್ಷ ನೀಡದ ಕಾರಣ ಜಮೀನನ್ನು ಮತ್ತೊಬ್ಬರ ಹೆಸರಿಗೆ ಮಾಡಿಸಿಕೊಟ್ಟಿದ್ದಾರೆ. ಜಮೀನಿನಲ್ಲೇ ಚಿಕ್ಕದೊಂದು ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಜೀವ ಬೆದರಿಕೆಯೂ ಹಾಕುತ್ತಿದ್ದಾರೆ. ಅಧಿಕಾರಿಗಳ ಕಿರುಕುಳಕ್ಕೆ ನನ್ನ ತಂದೆ, ಅಣ್ಣ ಪ್ರಾಣಹತ್ಯೆ ಮಾಡಿಕೊಂಡರು. ಈಗಿರುವುದು ನಾನೊಬ್ಬನೇ ಹೀಗಾದರೇ ನಾನೇಗೆ ಬದುಕಲಿ. ಬದುಕು ಬೀದಿಗೆ ಬರುವಂತಾಗಿದೆ...
ಹೀಗೆ, ಚಾಮರಾಜನಗರದ ಮಲ್ಲಯ್ಯನಪುರ ಗ್ರಾಮದ ಮರಿಸ್ವಾಮಿ ಎಂಬವರು ಕಣ್ಣೀರು ಹಾಕುತ್ತಾ ತಮಗಾಗಿರುವ ನೋವನ್ನು ಅಲವತ್ತುಕೊಂಡರು.
ಮಲ್ಲಯ್ಯನಪುರದ ದಿ.ನಂಜಯ್ಯ ಮತ್ತು ಕುಟುಂಬ 1961 ರಿಂದ 6 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದೆ. ಆರ್ಟಿಸಿ, ವಾರ್ಷಿಕ ಕಂದಾಯ ಸೇರಿದಂತೆ ಎಲ್ಲಾ ದಾಖಲೆಗಳು ಕ್ರಮ ಬದ್ಧವಾಗಿದೆ. ಸರ್ಕಾರಿ ಕೆಲಸಕ್ಕೆ ಹಣ ಪಡೆಯಬಾರದು. ಆದರೂ, ಪೋಡಿ ವಿಭಾಗದ ಸೂಪರ್ವೈಸರ್ ಪ್ರಕಾಶ್ ಎಂಬವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ₹ 50 ಸಾವಿರ ನೀಡಿದ್ದೇನೆ. ಆತ ಮತ್ತೆ ₹ 3 ಲಕ್ಷ ನೀಡುವಂತೆ ಪೀಡಿಸುತ್ತಿದ್ದಾರೆ. ಹಣ ನೀಡದ ಕಾರಣ ಎಡವಟ್ಟು ಮಾಡಿದ್ದಾರೆ ಎಂದು ಮರಿಸ್ವಾಮಿ ದೂರಿದ್ದಾರೆ.
ದುರಸ್ತು ಮಾಡುವ ಸಂದರ್ಭದಲ್ಲಿ ಪ್ರಕಾಶ್ ಅವರು ನನ್ನ ಜಮೀನನ್ನು ಬಿಸಲವಾಡಿ ಮಾದಯ್ಯ ಎಂಬವರಿಗೆ ಮಾಡಿಕೊಟ್ಟಿದ್ದಾರೆ. 2008ರಿಂದ ಇಲ್ಲಿಯ ತನಕ ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರ್ಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿ ನ್ಯಾಯ ಕೊಡಿಸುವಂತೆ ಪರಿಪರಿಯಾಗಿ ಬೇಡಿಕೊಂಡು ಕಣ್ಣೀರು ಹಾಕಿದರೂ, ನನ್ನ ಮನವಿ ಬೇಡದ ವಸ್ತುವಾಗಿದೆ ಎಂದು ಹೇಳುವಾಗ ಕಣ್ಣಲ್ಲಿ ನೀರು ತುಂಬಿತ್ತು. ಇತ್ತೀಚೆಗೆ ಕೆಲವರು ಇದು ನಮ್ಮ ಜಮೀನು ಎಂದು ಪ್ರಾಣ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳೇ ಪರಿಹರಿಸಿ: 40 ವರ್ಷಗಳಿಂದಲೂ ಕೃಷಿ ಚಟುವಟಿಕೆ ಮಾಡಿಕೊಂಡು ಬಂದ ಭೂಮಿ ಈಗ ಬೇರೆಯವರ ಹೆಸರಿಗೆ ದುರಸ್ತು ಆಗಿರುವುದು ವಿಪರ್ಯಾಸವೇ ಸರಿ. ಮರಿಸ್ವಾಮಿ ಅವರಿಗೆ ತುಂಬಾ ಅನ್ಯಾಯವಾಗಿದೆ. ಜಿಲ್ಲಾಧಿಕಾರಿಗಳೇ ಈಗಾಲಾದರೂ ಪರಿಶೀಲಿಸಿ. ಕಾನೂನುಗಳನ್ನೇ ತಿರುಚುವ ಕೆಳಹಂತದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಮೀನಿನ ಆಜುಬಾಜುದಾರ ಮಹದೇವಯ್ಯ ಒತ್ತಾಯಿಸಿದರು.