ಚಾಮರಾಜನಗರ: ಜಿಲ್ಲಾಡಳಿತ ಭವನದ ವಿವಿಧ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿದ್ದು, ಇದರ ನಡುವೆ ಅಧಿಕಾರಿಗಳು, ಸಿಬ್ಬಂದಿವರ್ಗ ಮನೆಗೆ ಬೇಗ ತೆರಳುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಹೌದು, ದೂರದ ಊರುಗಳಿಂದ ವಿವಿಧ ಕೆಲಸ ಕಾರ್ಯಗಳಿಗೆ ಬರುವ ಜನರು ಮಧ್ಯಾಹ್ನದ ಒಳಗೆ ಕೆಲಸ ಮಾಡಿಕೊಳ್ಳಬೇಕೆಂಬ ವಾತಾವರಣ ನಿರ್ಮಾಣವಾಗಿದೆ. ಬಹುಪಾಲು ಅಧಿಕಾರಿಗಳು, ಸಿಬ್ಬಂದಿ ಮೈಸೂರಿನಲ್ಲಿ ನೆಲೆಸಿದ್ದು, ಮಧ್ಯಾಹ್ನ 3.30 ಇಲ್ಲವೇ 5.10ರ ರೈಲು ಹಿಡಿಯುವ ಸಲುವಾಗಿ ಕೆಲಸ ಮೊಟಕುಗೊಳಿಸಿ ತೆರಳುತ್ತಿದ್ದು, ಜನ ರೋಸಿ ಹೋಗಿದ್ದಾರೆ.
ಈ ಕುರಿತು ಬಿವಿಎಸ್ ಜಿಲ್ಲಾ ಸಂಚಾಲಕ ಪರ್ವತರಾಜ್ ಮಾತನಾಡಿ, ಕಾಯಂ ಅಧಿಕಾರಿಗಳು ಇಲ್ಲ. ಸಮಯ ಮುಗಿಯುವ ತನಕ ಕಾರ್ಯನಿರ್ವಹಿಸುವ ಸಿಬ್ಬಂದಿಯೂ ಇಲ್ಲ. ನೂತನವಾಗಿ ಬಂದಿರುವ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕು. ಒಂದು ದಿನ ಜಿಲ್ಲಾಡಳಿತ ಭವನದ ವಿವಿಧ ಕಚೇರಿಗಳಿಗೆ ಭೇಟಿ ನೀಡಿದರೆ ಸತ್ಯ ದರ್ಶನ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.