ಚಾಮರಾಜನಗರ: ಕಂದಾಯ ಗ್ರಾಮವಾಗಿದ್ದರೂ ಗ್ರಾಪಂನಿಂದ ಯಾವುದೇ ಸೌಲಭ್ಯಗಳು ಸಿಗದ ಹಿನ್ನೆಲೆಯಲ್ಲಿ ಮುಂಬರುವ ಗ್ರಾಪಂ ಚುನಾವಣೆ ಬಹಿಷ್ಕರಿಸಲು ಹನೂರು ತಾಲೂಕಿನ ನಾಗಣ್ಣನಗರ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಕಳೆದ 5 ವರ್ಷಗಳ ಹಿಂದೆ ನಾಗಣ್ಣನಗರ ಗ್ರಾಮವನ್ನು ಅಜ್ಜಿಪುರ ಗ್ರಾಪಂನಿಂದ ರಾಮಾಪುರ ಗ್ರಾಪಂಗೆ ಸೇರಿಸಲಾಗಿತ್ತು. ಆದರೆ 5 ವರ್ಷಗಳಾದರೂ ಈ ಗ್ರಾಮವನ್ನು ಪಂಚತಂತ್ರ ಯೋಜನೆಗೆ ನೋಂದಾಯಿಸದಿರುವುದರಿಂದ ಸಕಲ ಸೌಲಭ್ಯಗಳಿಂದಲೂ ವಂಚಿತರಾಗಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಉದ್ಯೋಗ ಕಾರ್ಡ್, ಸಾಲ ಸೌಲಭ್ಯ, ವಸತಿ ಯೋಜನೆಗಳಂತಹ ಯಾವುದೇ ಸರ್ಕಾರಿ ಸವಲತ್ತುಗಳು ಕೂಡ ತಮಗೆ ತಲುಪುತ್ತಿಲ್ಲ ಎಂದಿರುವ ಗ್ರಾಮಸ್ಥರು, ಇಂದು ಸಭೆ ಸೇರಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.