ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನಲ್ಲೊಂದು ಮಾದರಿ ಕೆರೆ ರೂಪಿಸಲು ಯೋಜಿಸಲಾಗಿದ್ದು ಅಧಿವೇಶನದಲ್ಲಿ ಪ್ರಸ್ತಾಪಿಸಿ ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಕೊಳ್ಳೇಗಾಲದಲ್ಲಿ ರೈತರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಹೊನ್ನೂರು ಕೆರೆ, ಚಿಕ್ಕರಂಗನಾಥ-ದೊಡ್ಡರಂಗನಾಥ ಕೆರೆ ಹಾಗೂ ಪಾಳ್ಯ ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಹೂಳು ತೆಗೆದು, ನೀರು ಸರಾಗವಾಗಿ ಕೆರೆ ಸೇರುವಂತೆ ಮಾಡಲಾಗುವುದು ಜೊತೆಗೆ ಒತ್ತುವರಿಯನ್ನು ತೆರವುಗೊಳಿಸಲಿದ್ದು ಅಂದಾಜು ಮೊತ್ತದ ಪ್ರಸ್ತಾವನೆಯನ್ನು ಇದೇ 21ರೊಳಗೆ ಸಲ್ಲಿಸಬೇಕೆಂದು ನೀರಾವರಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ಇನ್ನು, ಜಿಲ್ಲೆಯ ಬಹುಪಾಲು ಕೆರೆಗಳು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಪ್ರತಿ ಎರಡನೇ ಶನಿವಾರ ತಹಶೀಲ್ದಾರ್ಗಳು ಕೆರೆ ಒತ್ತುವರಿ ಜಾಗಗಳನ್ನು ಗುರುತಿಸಿ ನಾಲ್ಕನೇ ಶನಿವಾರ ತೆರವುಗೊಳಿಸಬೇಕೆಂದು ಹೇಳಿದ್ದೇನೆ. ಕೆರೆ ಒತ್ತುವರಿ ತೆರವಾದ ಬಳಿಕ ಮತ್ತೆ ಒತ್ತುವರಿಯಾಗದಂತೆ ಆಯಾ ಅಧಿಕಾರಿಗಳು ಗಮನ ಹರಿಸಬೇಕೆಂದು ತಿಳಿಸಿದ್ದೇನೆ ಎಂದರು.
ಇದಕ್ಕೂ ಮುನ್ನ, ಹನೂರು, ಯಳಂದೂರು ಹಾಗೂ ಕೊಳ್ಳೇಗಾಲ ತಾಲೂಕಿನ 12 ಕೆರೆಗಳನ್ನು ರೈತ ಮುಖಂಡರೊಂದಿಗೆ ವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಅಣಗಳ್ಳಿ ಬಸವರಾಜ್, ಶಾಸಕರಾದ ಮಹೇಶ್ ಹಾಗೂ ನರೇಂದ್ರ ಇದ್ದರು.