ಚಾಮರಾಜನಗರ: ಸಚಿವ ಸುರೇಶ್ ಕುಮಾರ್ ಇಂದಿನ ಕೆಡಿಪಿ ಸಭೆಯಲ್ಲಿ ರೈತ ಮುಖಂಡರ ಜೊತೆ ಬರೋಬ್ಬರಿ ನಾಲ್ಕೂವರೆ ತಾಸು ಸಭೆ ಸೇರಿ ಚರ್ಚೆ ನಡೆಸಿದರು.
ಮಳೆ ಬಿದ್ದಾಗ ಕಾಲುವೆ ಮೂಲಕ ಕೆರೆಗಳಿಗೆ ಮಳೆ ನೀರು ಹೋಗಿ ಕೆರೆಗಳಿಗೆ ನೀರು ತುಂಬುತ್ತಿತ್ತು. ಈಗ ಮಳೆ ನೀರು ಕೆರೆಗಳಿಗೆ ಹೋಗುತ್ತಿಲ್ಲ. ಕಾರಣ ಕೆರೆಗಳಿಗೆ ಮಳೆ ನೀರು ಹೋಗುತ್ತಿದ್ದ ಕಾಲುವೆ ಹಾಗೂ ಕೆರೆಯ ಜಾಗಗಳು ಒತ್ತುವರಿಯಾಗಿವೆ. ಅದನ್ನು ತೆರವು ಮಾಡುವ ಕೆಲಸದ ಜವಾಬ್ದಾರಿ ನಿಮ್ಮದು ಎಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ರೈತ ಮುಖಂಡ ಹೊನ್ನೂರು ಪ್ರಕಾಶ್ ಹಾಗೂ ಹೆಬ್ಬಸೂರು ಬಸವಣ್ಣ ಮಾತನಾಡಿ, ತಮಿಳುನಾಡಿಗೆ ನೀರು ಹರಿದುಹೋಗುತ್ತಿದೆ. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಕಬಿನಿ ನೀರಾವರಿ ಇಲಾಖೆಯ ಇಇ ರಂಗರಾಮು ಮಾತನಾಡಿ, ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ 4 ಹಂತದ ಯೋಜನೆಗಳಿದ್ದು, 3ನೇ ಹಂತದ ಯೋಜನೆ ಹುತ್ತೂರು ನೀರು ತುಂಬಿಸುವ ಯೋಜನೆಯಿಂದ ನೀರು ತುಂಬುತ್ತಿದ್ದು, ಈ ತಿಂಗಳ ಅಂತ್ಯದಲ್ಲಿ 7 ಕೆರೆಗಳಿಗೂ ನೀರು ತುಂಬಲಿದೆ. 4ನೇ ಹಂತದ ಯೋಜನೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಸಚಿವ ಸುರೇಶ್ ಕುಮಾರ್ ಮಾತನಾಡಿ, ಅನುಪಾಲನಾ ವರದಿ ಸತ್ಯವಾದ ಹಾಗೂ ವಾಸ್ತವಿಕ ವರದಿಯಾಗಿರಬೇಕು. ಸತ್ಯವಾದ ವರದಿ ನೀಡಿದರೆ, ಯಾರಿಗೂ ತಲೆದಂಡ ಹಾಕುವುದಿಲ್ಲ. ಮಳೆ ಬಿದ್ದಿರುವುದರಿಂದ ನದಿಯಲ್ಲಿ ನೀರು ಇದೆ. ಯೋಜನೆಗೆ ಬದ್ಧವಾಗಿ ಕೆಲಸ ಮಾಡಿ ಮುಂದಿನ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಾರದಂತೆ ಕೆಲಸ ಮಾಡಬೇಕು ಎಂದು ಅಧಿಕಾರಿಗೆ ಸೂಚನೆ ನೀಡಿದರು.
ಕಾಡಂಚಿನ ಗ್ರಾಮಗಳಲ್ಲಿ ಸಾಕುವ ದನಗಳಿಗೆ ಕಾಡಿನಲ್ಲಿ ಮೇವು ಮೇಯಲು ಅವಕಾಶ ಮಾಡಿಕೊಡಬೇಕು. ದನಗಳಿಗೆ ಕಡಿವಾಣ ಹಾಕಬೇಡಿ ಎಂದು ನಿರ್ದೇಶನ ನೀಡಿದರು. ಇದೇ ವೇಳೆ, ಕಾಡಂಚಿನ ಗ್ರಾಮಗಳಲ್ಲಿ ಒಂದಾದ ತುಳಸಿಕೆರೆ ಗ್ರಾಮಕ್ಕೆ ಅಕ್ಟೋಬರ್ 3ರಂದು ಗ್ರಾಮ ವಾಸ್ತವ್ಯವನ್ನು ಮಾಡುತ್ತೇನೆ. ಅಲ್ಲಿನ ಸುತ್ತಮುತ್ತಲ 8 ಗ್ರಾಮಗಳ ಪ್ರತಿನಿಧಿಗಳು ಅ ಗ್ರಾಮಕ್ಕೆ ಬಂದು ಸಮಸ್ಯೆಯನ್ನು ತಿಳಿಸಿ. ಅಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಅರಿತುಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆ: ಸಭೆಗೆ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಹನೂರು ಶಾಸಕ ಆರ್.ನರೇಂದ್ರ ಹಾಗೂ ಕೊಳ್ಳೇಗಾಲ ಶಾಸಕ ಮಹೇಶ್ ಗೈರಾಗಿದ್ದಕ್ಕೆ ಕುಪಿತಗೊಂಡ ರೈತರು ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ತೆರಕಣಾಂಬಿ ಕಾಲೇಜು ಸ್ಥಳಾಂತರ ವಿಚಾರ ಹಾಗೂ ಕೆರೆಗೆ ನೀರು ತುಂಬುವ ವಿಚಾರದಲ್ಲಿ ಸಚಿವರು ಹಾಗೂ ರೈತ ಮುಖಂಡರ ನಡುವೆ ತೀವ್ರ ಚರ್ಚೆ ನಡೆದು ಸಭೆಯಲ್ಲಿ ಕೋಲಾಹಲ ವಾತಾವರಣ ಸೃಷ್ಟಿಯಾಗಿತ್ತು.