ಚಾಮರಾಜನಗರ : ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ತೀರಾ ಇಳಿಕೆಯಾಗಿವೆ. ವಾರಾಂತ್ಯ ಕರ್ಫ್ಯೂ ಅಗತ್ಯವಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೇನೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಸುತ್ತೂರಿನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಎರಡು ಜಿಲ್ಲೆಗಳಿಗೆ ವಾರಾಂತ್ಯ ಕರ್ಫ್ಯೂ ಬೇಡ ಎಂದು ಸಿಎಂಗೆ ತಿಳಿಸಿದ್ದೇನೆ. ಇದೊಂದು ವಾರ ಕರ್ಫ್ಯೂ ಇರಲಿ ಎಂದು ಕಳೆದ ವಾರ ಸಿಎಂ ಹೇಳಿದ್ದರು. ಅದರಂತೆ ಇಂದು ಬೆಂಗಳೂರಿಗೆ ಹೋಗುತ್ತಿದ್ದೇನೆ. ಸಿಎಂ ಜೊತೆ ಮಾತನಾಡುತ್ತೇನೆ ಎಂದರು.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆರೋಪಿಗಳ ಪತ್ತೆಗೆ ಗಂಭೀರ ಕ್ರಮವಹಿಸಲಾಗಿದೆ. ಆದರೆ, ಆರೋಪಿಗಳ ಪತ್ತೆಗೆ ಸಂತ್ರಸ್ತರು ಸಹಕರಿಸಬೇಕಾಗುತ್ತದೆ, ಇನ್ನೂ ತನಿಖೆಗೆ ಸಂತ್ರಸ್ತೆ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಇದೆ ಎಂದರು.
ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಸಂತ್ರಸ್ತೆ ಯಾರ ಜೊತೆಯು ಮಾತನಾಡುವುದಿಲ್ಲ ಎಂದು ನೇರವಾಗಿ ಹೇಳುತ್ತಿದ್ದಾಳೆ. ಆಕೆಯ ತಂದೆ, ತಾಯಿ ಸಹ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಗೃಹ ಸಚಿವರು ಸಮರ್ಥರಿದ್ದಾರೆ, ಆರೋಪಿಗಳನ್ಮು ಬಂಧಿಸಲಾಗುವುದು ಎಂದು ಹೇಳಿದರು.
ಸಚಿವ ಉಮೇಶ್ ಕತ್ತಿ ಅವರ 5 ಕೆಜಿ ಅಕ್ಕಿ ಸಾಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಹೇಳಿಕೆ, ಅವರು ಹೇಳಿದಾಕ್ಷಣ ಪಡಿತರ ಕಡಿಮೆ ಮಾಡಲಾಗಲ್ಲ. ಸಂಪುಟದಲ್ಲಿ ನಿರ್ಧಾರ ಆಗಲಿದೆ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಜಿಮ್ ಟ್ರೈನರ್ ಬರ್ಬರ ಕೊಲೆ : ಹುಡುಗಿ ವಿಚಾರಕ್ಕೆ ನಡೆಯಿತಾ ಈ ಕೃತ್ಯ?