ಕೊಳ್ಳೇಗಾಲ(ಚಾಮರಾಜನಗರ): ರಾಜ್ಯ ಸರ್ಕಾರದ ಆದೇಶದಂತೆ ಕೊರೊನಾ 2ನೇ ಅಲೆ ತಡೆಗೆ 14 ದಿನಗಳು ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಅನ್ನು ಕಠಿಣವಾಗಿ ಜಾರಿಗೊಳಿಸಲು ಇಲ್ಲಿನ ತಾಲ್ಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ. ರಾತ್ರಿ ಪಟ್ಟಣದಲ್ಲಿ ಪೆರೇಡ್ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದೆ.
ತಾಲ್ಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ವೇಗವಾಗಿ ವ್ಯಾಪಿಸುತ್ತಿರುವ ಕೊರೊನಾ ಸೊಂಕು ನಿಗ್ರಹಕ್ಕೆ ಟೊಂಕ ಕಟ್ಟಿನಿಂತಿದ್ದು, ಏ.21 ರಿಂದ ಮೇ 4 ರವರೆಗಿನ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯ ನಿರ್ಬಂಧವನ್ನು ಯಶಸ್ವಿಗೊಳಿಸಲು ರಸ್ತೆಗಿಳಿದು ಪಟ್ಟಣದಾದ್ಯಂತ ಪೆರೇಡ್ ನಡೆಸಿ ಜಾಗೃತಿ ಮೂಡಿಸಿತು.
ನಗರಸಭೆ ಕಸ ವಿಲೇವಾರಿ ವಾಹನ ಹಾಗೂ ಆಟೋಗಳಿಗೆ ಮೈಕ್ ಅಳವಡಿಸಿ ಕೊರೊನಾ ಕರ್ಫೂ ಬಗ್ಗೆ ಜಿಲ್ಲಾಡಳಿತ ಆದೇಶದ ಸೂಚನೆಗಳನ್ನು ಸಾರಲಾಯಿತು. ಈ ವೇಳೆ ತಹಶೀಲ್ದಾರ್ ಕುನಾಲ್ ಮಾತನಾಡಿ, ಸರ್ಕಾರದ ಆದೇಶದಂತೆ ರಾಜ್ಯದ್ಯಂತ ನೈಟ್ ಕರ್ಫ್ಯೂ, ವಿಕೆಂಡ್ ಕರ್ಫ್ಯೂ ನಿನ್ನೆ ರಾತ್ರಿಯಿಂದ ಜಾರಿಯಲ್ಲಿದ್ದು. 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ರಾತ್ರಿ 9 ಗಂಟೆ ಯಿಂದ 6 ಗಂಟೆಯ ವರೆಗೆ ಅನಾವಶ್ಯಕ ತಿರುಗಾಟಕ್ಕೆ ಬ್ರೇಕ್ ಹಾಕಬೇಕು. ಗುಂಪುಗೂಡಿ ಓಡಾಡಬಾರದು. ವರ್ತಕರು ಸ್ವಯಂ ಪ್ರೇರಿತವಾಗಿ ರಾತ್ರಿ 9 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚಬೇಕು. ಕೊರೊನಾ ತಡೆಗಟ್ಟಲು ನಮ್ಮೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ವೃತ್ತ ನಿರೀಕ್ಷಕ ಶಿವರಾಜ್ ಬಿ. ಮುಧೋಳ್ ಮಾತನಾಡಿ, ಕೋವಿಡ್ ನಿಯಮಾವಳಿಗಳನ್ನು ಸಾರ್ವಜನಿಕರು ಪಾಲಿಸಬೇಕು. 14 ದಿನಗಳ ಕಾಲ ಜಾರಿಯಲ್ಲಿರುವ ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂಗೆ ಪೊಲೀಸರೊಂದಿಗೆ ಸ್ಪಂದಿಸಬೇಕು. ಒಂದು ವೇಳೆ ಉದಾಸೀನ ಮನೋಭಾವನೆಯಿಂದ ನಿಮಯ ಉಲಂಘಿಸಿದ್ದೆ ಆದರೆ ಕಠಿಣ ಕಾನೂನೂ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.