ಚಾಮರಾಜನಗರ: ಗಡಿ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದ ತನಕ ಮೆರವಣಿಗೆ ನಡೆಸಿ, ಉದ್ಧವ್ ಠಾಕ್ರೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಕನ್ನಡಿಗರನ್ನು ಕೆಣಕಬಾರದೆಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಪ್ರತಿಭಟನಾಕಾರರು ಉದ್ಧವ್ ಠಾಕ್ರೆ ಭಾವಚಿತ್ರವನ್ನು ಸುಟ್ಟು ಸೊಲ್ಲಾಪುರ ನಮ್ಮದು ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ, ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಪದೇ ಪದೆ ಗಡಿ ತಗಾದೆ ತೆಗೆಯುತ್ತಿರುವ ಉದ್ಧವ್ ಠಾಕ್ರೆ ರಾಜ್ಯಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇವೆ ಎಂದು ಎಚ್ಚರಿಸಿದರು.
ಮಹಾರಾಷ್ಟ್ರ ಸಿಎಂ ಅಷ್ಟೆಲ್ಲ ಮಾತಾಡುತ್ತಿದ್ದರೂ ರಾಜ್ಯದ ಆಡಳಿತ ಪಕ್ಷವಾಗಲಿ, ವಿರೋಧಪಕ್ಷ ಕಾಂಗ್ರೆಸ್ ಆಗಲಿ ಮೌನ ವಹಿಸಿರುವುದು ಸರಿಯಲ್ಲ. ಮತ ಬ್ಯಾಂಕಿಗಾಗಿ ರಾಜ್ಯದ ಹಿತವನ್ನು ರಾಷ್ಟ್ರೀಯ ಪಕ್ಷಗಳು ಬಲಿ ಕೊಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು.