ಚಾಮರಾಜನಗರ: ಹೆಚ್ಚುತ್ತಲೇ ಇರುವ ಕಾವೇರಿ ಆರ್ಭಟಕ್ಕೆ ಪ್ರಸಿದ್ಧ ಹೊಗೇನಕಲ್ ಜಲಪಾತದ ಪಾಲಮಡು ಬ್ರಿಡ್ಜ್ ನೀರಿನ ರಭಸಕ್ಕೆ ಮುರಿದು ಬಿದ್ದಿದೆ ಎಂದು ಮೂಲಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿವೆ.
ಭೋರ್ಗರೆದು ಧುಮ್ಮಿಕುವ ಜಲಸಿರಿಯನ್ನು ಕಣ್ತುಂಬಿಕೊಳ್ಳಬಹುದಾಗಿದ್ದ ವೀಕ್ಷಣಾ ಗೋಪುರಕ್ಕೆ ಪಾಲಮಡು ಬ್ರಿಡ್ಜ್ ಸಂಪರ್ಕ ಕಲ್ಪಿಸುತ್ತಿತ್ತು. ಆದರೆ, ಈಗ ಬ್ರಿಡ್ಜ್‌ನ ಪಿಲ್ಲರ್ ಸೇರಿ ಒಂದು ಭಾಗವೇ ಪಕ್ಕಕ್ಕೆ ಸರಿದಿದ್ದು ಬ್ರಿಡ್ಜ್ ನೀರುಪಾಲಾಗಿರುವುದು ಖಚಿತವಾಗಿದೆ. ಕಳೆದ ವರ್ಷ ಕಾವೇರಿ ಆರ್ಭಟಕ್ಕೆ ಬ್ರಿಡ್ಜ್ ಶಿಥಿಲಗೊಂಡಿತ್ತು. ಈಗ ಒಂದು ಭಾಗವೇ ಮುರಿದಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಹಾನಿ ಪ್ರಮಾಣ ತಿಳಿದುಬಂದಿಲ್ಲ. ಇನ್ನು ಗೋಪಿನಾಥಂ-ಹೊಗೇನಕಲ್ ಜಲಪಾತದ ರಸ್ತೆಯ ಮೇಲೂ ನೀರು ಹರಿಯುತ್ತಿರುವುದರಿಂದ ಸಂಚಾರ ಬಂದ್ ಆಗಿದೆ.