ಚಾಮರಾಜನಗರ: ಇಂದಿನಿಂದ ಜಿಲ್ಲಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದ ಹಿನ್ನೆಲೆಯಲ್ಲಿ ಹೆಲ್ಮೆಟ್ ರಹಿತ ವಾಹನ ಸವಾರರ ಭರ್ಜರಿ ಬೇಟೆ ನಡೆಯಿತು.
ಜಿಲ್ಲಾ ಕೇಂದ್ರ, ಕೊಳ್ಳೇಗಾಲ, ಯಳಂದೂರು ಸಮೀಪದ ಅಗರ-ಮಾಂಬಳ್ಳಿ ರಸ್ತೆ, ಗುಂಡ್ಲುಪೇಟೆಯಲ್ಲಿ ಹೆಲ್ಮೆಟ್ ರಹಿತ ವಾಹನ ಸವಾರರಿಗೆ ದಂಡ ವಿಧಿಸಿ ಹೆಲ್ಮೆಟ್ ಧರಿಸುವಂತೆ ತಿಳಿಹೇಳಲಾಯಿತು. ಜಿಲ್ಲಾ ಕೇಂದ್ರದ ಭುವನೇಶ್ವರಿ ವೃತ್ತ, ಅಂಗಡಿ ಬೀದಿ, ಜೋಡಿ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ಹಿಡಿದು ದಂಡ ವಿಧಿಸಿದರು.
ಬೆಳಗ್ಗೆ ಪ್ರಾರಂಭವಾದ ಪೊಲೀಸರ ಬೇಟೆಯಲ್ಲಿ ಸಂಜೆವರೆಗೆ 980 ಪ್ರಕರಣ ದಾಖಲಿಸಿ 98 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಕೇಂದ್ರ ಒಂದರಲ್ಲೇ 200 ಪ್ರಕರಣ ದಾಖಲಿಸಿ 60 ಸಾವಿರ ರೂ. ದಂಡ ವಸೂಲಿ ಮಾಡಿ ಹೆಲ್ಮೆಟ್ ಇಲ್ಲದೇ ಸವಾರಿ ಮಾಡುತ್ತಿದ್ದವರಿಗೆ ಬಿಸಿ ಮಟ್ಟಿಸಿದ್ದಾರೆ. ನಾಳೆಯೂ ಕೂಡ ಪೊಲೀಸರ ಬೇಟೆ ಮುಂದುವರೆಯಲಿದ್ದು, ದಂಡ ಕಟ್ಟುವ ಬದಲು ಜೀವರಕ್ಷಕ ಹೆಲ್ಮೆಟ್ ಧರಿಸಿ, ಸಂಯಮದಿಂದ ವಾಹನ ಚಲಾಯಿಸಬೇಕಿದೆ.
ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ಪೊಲೀಸ್: ಭುವನೇಶ್ವರಿ ವೃತ್ತದಲ್ಲಿ ಒಂದು ಕಡೆ ಪೊಲೀಸರು ಹೆಲ್ಮೆಟ್ ಧರಿಸದಿದ್ದವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದರೆ, ಇತ್ತ ಮಹಿಳಾ ಪೊಲೀಸರೊಬ್ಬರು ಹೆಲ್ಮೆಟ್ ಧರಿಸದೇ ಮೊಪೆಡ್ನಲ್ಲಿ ಭರ್ ಎಂದು ಸಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.