ಚಾಮರಾಜನಗರ: ಮುಂದಿನ ವರ್ಷ ಜಪಾನ್ನಲ್ಲಿ ನಡೆಯುವ ಮಾಸ್ಟರ್ ಗೇಮ್ನ ಅಥ್ಲೆಟಿಕ್ ವಿಭಾಗದಲ್ಲಿ ಗುಂಡ್ಲುಪೇಟೆ ಯುವಕ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದ ದೊಡ್ಡಪ್ಪಾಜಿ ಎಂಬ ಯುವಕ ವಿಶ್ವ ಮಾಸ್ಟರ್ ಗೇಮ್- 2022ಕ್ಕೆ ಆಯ್ಕೆಯಾಗಿದ್ದು, ಅಥ್ಲೆಟಿಕ್ಸ್ನ 5,000, 10,000 ಮೀಟರ್ ಮತ್ತು ಹಾಫ್ ಮ್ಯಾರಥಾನ್ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
ದೊಡ್ಡಪ್ಪಾಜಿ ಅವರು ಹೊನ್ನಶೆಟ್ಟರಹುಂಡಿ ಗ್ರಾಮದ ರಾಜಚಾರಿ, ರತ್ಮಮ್ಮ ದಂಪತಿ ಮಗನಾಗಿದ್ದು ಪ್ರಸ್ತುತ ಹಾಸನ ಜಿಲ್ಲೆಯ ಬಾಗೆ ಗ್ರಾಮದ ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರೌಢಶಾಲಾ ಹಾಗು ಪಿಯುಸಿ ಹಂತದಲ್ಲಿಯೇ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಇವರು ಪದವಿ ಹಂತದಲ್ಲಿ ಉತ್ತರಾಖಂಡ, ಆಂಧ್ರಪ್ರದೇಶ, ಹರಿಯಾಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೇ, ದಸರಾ ರಾಜ್ಯ ಮಟ್ಟದ ಕ್ರೀಡಾಕೂಟ 2011, 2015ರಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಇದನ್ನೂ ಓದಿ: ನಾವು ಜಾತಿ ಲೆಕ್ಕಾಚಾರ ಇಡಲ್ಲ, ನೀತಿ ಮೂಲಕ ರಾಜಕೀಯ ಮಾಡ್ತೀವಿ: ಡಿಕೆಶಿ
2004ರಿಂದ ಮಾಡಿದ ನಿರಂತರ ಪ್ರಯತ್ನದಿಂದಾಗಿ ಹಂತ ಹಂತವಾಗಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಖುಷಿ ತಂದಿದೆ ಎಂದು ದೊಡ್ಡಪ್ಪಾಜಿ ಸಂತಸ ಹಂಚಿಕೊಂಡರು.