ಗುಂಡ್ಲುಪೇಟೆ (ಚಾಮರಾಜನಗರ): ಶಾಲೆಗಳಲ್ಲಿ ತರಗತಿಗಳು ಆರಂಭವಾಗದ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಶಿಕ್ಷಕರು ಭೇಟಿ ನೀಡಿ, ಪಾಠ ಮಾಡುತ್ತಿದ್ದಾರೆ.
ಕೊರೊನಾ ಇತ್ತೀಚಿನ ದಿನಗಳಲ್ಲಿ ಸಮುದಾಯಕ್ಕೆ ಹರಡಿರುವುದರಿಂದ ಶಾಲೆಗಳು ಆರಂಭವಾಗಿಲ್ಲ. ಹಾಗಾಗಿ ಗ್ರಾಮದ ಮಕ್ಕಳನ್ನು ಒಟ್ಟುಗೂಡಿಸಿ ಮಕ್ಕಳಿಗೆ ಕಷ್ಟವಾಗುವ ಪಠ್ಯವನ್ನು ಶಿಕ್ಷಕರು ಹೇಳಿ ಕೊಡುತ್ತಿದ್ದಾರೆ. ಗ್ರಾಮದಲ್ಲಿ ಖಾಲಿ ಇರುವ ಸಮುದಾಯ ಭವನ, ದೇವಸ್ಥಾನ ಇತರ ಸ್ಥಳದಲ್ಲಿ ಮಕ್ಕಳನ್ನು ಸೇರಿಸಿ ಅಭ್ಯಾಸ ಮಾಡಿಸುತ್ತಿದ್ದಾರೆ.
ಪಾಠ ನಡೆಯುತ್ತಿರುವ ಸ್ಥಳಕ್ಕೆ ಗುರುವಾರ ಶಾಸಕ ಸಿ.ಎಸ್. ನಿರಂಜನಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಕ್ಕಳ ಜೊತೆಯಲ್ಲಿ ಮಾತನಾಡಿ, ಶಾಲೆ ಇನ್ನೂ ಆರಂಭವಾಗಿಲ್ಲ. ಆದ್ದರಿಂದ ಇಂತಹ ಸ್ಥಳದಲ್ಲಿ ಪಾಠ ಮಾಡುತ್ತಿದ್ದಾರೆ. ಇದರಿಂದಾಗಿ ಏನಾದರೂ ತೊಂದರೆ ಇದೆಯಾ ಎಂದು ವಿಚಾರಿಸಿದರು. ಮಕ್ಕಳು ಏನೂ ತೊಂದರೆ ಇಲ್ಲ, ಕಲಿಯಲು ಆಸಕ್ತಿ ಇದೆ, ಆದ್ದರಿಂದ ಬರುತ್ತಿರುವುದಾಗಿ ಹೇಳಿದರು.