ಚಾಮರಾಜನಗರ: ತಾನು 'ತೃತೀಯ ಲಿಂಗಿ' ಎಂದೇ ಘೋಷಿಸಿಕೊಂಡು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯಾಗಿಯೇ ಇವರು ಪಿಹೆಚ್ಡಿ ಮಾಡುತ್ತಿದ್ದಾರೆ. ಜತೆಗೆ ಪಿಹೆಚ್ಡಿ ಮಾಡುತ್ತಿರುವ 'ಕರ್ನಾಟಕದ ಮೊದಲ ಲೈಂಗಿಕ ಅಲ್ಪಸಂಖ್ಯಾತೆ' ಇವರಾಗಿದ್ದಾರೆ.
ಹೌದು. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ವಾಸವಿರುವ 'ದೀಪು ಬುದ್ಧೆ' ಎಂಬ ಲೈಂಗಿಕ ಅಲ್ಪಸಂಖ್ಯಾತ ಮಹಿಳೆ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗುವ ಮೂಲಕ ಸಮುದಾಯದ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆಂತರ್ಯದಲ್ಲಿ ಹೆಣ್ಣಿನ ಭಾವನೆ ಇಟ್ಟುಕೊಂಡು, ಬಹಿರಂಗದಲ್ಲಿ ಗಂಡಾಗಿ ಕೆಲವರು ಪಿಹೆಚ್ಡಿ ಮಾಡಿದ್ದರೂ, ದೀಪು ಬುದ್ಧೆ ಮಾತ್ರ ಲಿಂಗತ್ವ ಅಲ್ಪಸಂಖ್ಯಾತೆಯಾಗಿಯೇ ದಾಖಲಾತಿಗಳಲ್ಲಿ ಹೆಸರಿಸಿಕೊಂಡಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದಲ್ಲೇ ಗುರುತಿಸಿಕೊಂಡು ಎಂಎ ಮಾಡಿದವರಲ್ಲಿ ಹಾಗೂ ಈಗ ಪಿಹೆಚ್ಡಿ ಮಾಡುತ್ತಿರುವಲ್ಲಿ ರಾಜ್ಯದ ಮೊದಲಿಗರಾಗಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರು ಸರ್ಕಾರದ ದಾಖಲಾತಿಗಳಲ್ಲಿ ಪ್ರವೇಶ ಪಡೆದು ಸಂಶೋಧನಾ ವಿದ್ಯಾರ್ಥಿಯಾಗಿರುವರಲ್ಲಿ ದೀಪು ಮೊದಲನೇ ವ್ಯಕ್ತಿಯಾಗಿದ್ದು, ಕೆಲವೇ ವರ್ಷಗಳಲ್ಲಿ ಇವರ ಕೊರಳಿಗೆ ಡಾಕ್ಟರೇಟ್ ಪದವಿ ಸಿಗಲಿದೆ.
ತನ್ನವರ ಬಗ್ಗೆಯೇ ಸಂಶೋಧನೆ: ದೀಪು ಬುದ್ಧೆ ಈಗ ಸಂಶೋಧನಾ ವಿಷಯವಾಗಿ ಆರಿಸಿಕೊಂಡಿರುವ ವಿಚಾರವೂ ಅವರ ಸಮುದಾಯದ ಬಗ್ಗೆಯೇ ಆಗಿದೆ. "ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಲಿಂಗತ್ವ ಅಲ್ಪಸಂಖ್ಯಾತರ ಜೀವನ ಮತ್ತು ಹೋರಾಟಗಳು - ಒಂದು ವಿಮರ್ಶಾತ್ಮಕ ಅಧ್ಯಯನ" ಎಂಬ ವಿಷಯ ಕುರಿತು ಡಾ.ಸೋಮಶೇಖರ್ ಮಾರ್ಗದರ್ಶನದಲ್ಲಿ ಕಳೆದ 7 ತಿಂಗಳುಗಳಿಂದ ಸಂಶೋಧನೆ ಮಾಡುತ್ತಿದ್ದಾರೆ.
ವಿದ್ಯಾರ್ಥಿಯಾಗಿ ಓದುವಾಗಿನ ಸಮಸ್ಯೆಗಳು, ವಾತಾವರಣ ಸ್ಥಿತಿ, ಸಮಾಜ ನೋಡುವ ಬಗೆ, ಪರಿವರ್ತನಾ ಮಹಿಳೆಯರ ಹಿನ್ನೆಲೆ, ಸಮುದಾಯ ವ್ಯಕ್ತಿಗಳ ಹೋರಾಟ, ಬದುಕಿನ ಬಗ್ಗೆ ತೌಲನಿಕ ಅಧ್ಯಯನ ನಡೆಸುತ್ತಿದ್ದು, ಇವರ ಈ ಓದುವ ಛಲಕ್ಕೆ ಪರಿವರ್ತನಾ ಮಹಿಳೆಯರು, ಮೈಸೂರು ವಿವಿ ಪ್ರಾಧ್ಯಾಪಕರು ಸಾಥ್ ನೀಡುತ್ತಿದ್ದಾರೆ.
ಹುಡುಗನಾಗಿ ಪದವಿ- ಹುಡುಗಿಯಾಗಿ ಎಂಎ, ಪಿಹೆಚ್ಡಿ: ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ ಗ್ರಾಮದವಾರದ ದೀಪು ಬುದ್ಧೆ 8 ನೇ ತರಗತಿಯಲ್ಲಿ ತಾನು ಮಹಿಳೆ ಎಂಬ ಭಾವನೆ ಬಂದರೂ ಅದುಮಿಟ್ಟು ಗುರುಸ್ವಾಮಿ ಎಂಬ ಹುಡುಗನಾಗಿಯೇ ಪಿಯುಸಿ ವರೆಗೆ ಓದಿದರು.
ಬಳಿಕ ಹೆಣ್ಣೆಂಬ ಭಾವನೆ ಮತ್ತಷ್ಟು ಗಟ್ಟಿಯಾದ್ದರಿಂದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದಲ್ಲಿ ಗುರುತಿಸಿಕೊಂಡರು. ಆದರೆ, ಸಮಾಜದಲ್ಲಿ ಗುರುಸ್ವಾಮಿ ಆಗಿಯೇ ಉಳಿದಿದ್ದರು. ಪದವಿಯನ್ನು ಹುಡುಗ ಎಂದೇ ಮಾಡಿ ಕೊನೆಗೆ ತಾನು ಹೆಣ್ಣು ಎಂದು ಸಮಾಜದ ಮುಂದೆ ತೋರ್ಪಡಿಸಿಕೊಂಡರು. ಕೀಳರಿಮೆ, ಮಾನಸಿಕ ಒತ್ತಡಗಳಿಂದಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಭಿಕ್ಷಾಟನೆಗಿಳಿದರು.
ತೃತೀಯ ಲಿಂಗಿಯಾಗಿ ಎಂಎ ಪದವಿ ಪಡೆದ ಮೊದಲಿಗರು: ಆಗಾಗ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಓದುತ್ತಿದ್ದರಿಂದ ಪ್ರೇರಣೆಗೊಂಡ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂಎ ಪದವಿಯನ್ನು ತೃತೀಯ ಲಿಂಗಿಯಾಗಿಯೇ 2018-2020 ರ ಸಾಲಿನಲ್ಲಿ ಮಾಡುವ ಮೂಲಕ ತೃತೀಯ ಲಿಂಗಿ ಎಂದು ಸರ್ಕಾರಿ ದಾಖಲಾತಿಗಳಲ್ಲಿ ಹೆಸರಿಸಿಕೊಂಡು ಓದಿದ ಮೊದಲಿಗರಾಗಿದ್ದಾರೆ.
ಆರಂಭದಲ್ಲಿ ಗಂಡು ಮತ್ತು ಹೆಣ್ಣು ಎರಡು ಕಾಲಂ ಮಾತ್ರ ಇದ್ದಿದ್ದುರಿಂದ ಹೋರಾಡಿ ತನ್ನನ್ನು ಲಿಂಗತ್ವ ಅಲ್ಪಸಂಖ್ಯಾತರ ಅಡಿಯಲ್ಲಿಯೇ ದಾಖಲಿಸಿಕೊಳ್ಳಬೇಕೆಂದು ಪಟ್ಟು ಹಿಡಿದು ಅದೇ ರೀತಿ ಶೇ.80 ರ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ.
ಪರಿವರ್ತನ ಮಹಿಳೆ ಎಂದೇ ಹೇಳಿ: ಈ ಸಂಬಂಧ ದೀಪು ಬುದ್ಧೆ 'ಈಟಿವಿ ಭಾರತ' ಜತೆ ಮಾತನಾಡಿ, ಸಮುದಾಯದ ಜನರು ಶಿಕ್ಷಣವನ್ನು ಮೊಟಕುಗೊಳಿಸದೇ ಪರಿವರ್ತನ ಮಹಿಳೆಯಾಗಿಯೇ ಗುರುತಿಸಿಕೊಂಡು ಓದಬೇಕು. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು, " ಪಿಹೆಚ್ಡಿ ಮಾಡುತ್ತಿರುವ ಮೊದಲ ಲಿಂಗತ್ವ ಅಲ್ಪಸಂಖ್ಯಾತೆ " ಎಂದು ಹೇಳಿಕೊಳ್ಳಲು ತನಗೆ ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.
ಇವರ ಬಗ್ಗೆ ಸಮುದಾಯ ಜನ ಏನಂತಾರೆ: ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಸಂಯೋಜಕರಾದ ಮಲ್ಲಮ್ಮ ಮಾತನಾಡಿ, ದೀಪು ಬುದ್ಧೆ ಅವರು ಏನಾದರೂ ಸಾಧನೆ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ, ತಾನೂ ಶಿಕ್ಷಣ ಪಡೆದು ಡಾಕ್ಟರೇಟ್ ಪದವಿಯನ್ನು ಪಡೆಯುತ್ತೇನೆ ಎಂದು ಮುಂದಾಗಿ ಅದರಂತೆ ಪಿಹೆಚ್ಡಿ ಮಾಡುತ್ತಿದ್ದಾರೆ.
ಸಾವಿರಾರು ಮಂದಿಗೆ ದೀಪು ಮಾದರಿಯಾಗುತ್ತಾರೆ. ಲಿಂಗತ್ವ ಅಲ್ಪಸಂಖ್ಯಾತರು ಅಬ್ಬಬ್ಬಾ ಎಂದರೆ 9 ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿ ಬಳಿಕ ಶಿಕ್ಷಣ ಮೊಟಕು ಮಾಡುತ್ತಾರೆ. ಆದ್ದರಿಂದ, ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ದೀಪಾ ಬುದ್ಧೆ ಅವರಿಗೂ ಸಹಕಾರ ಕೊಡಬೇಕೆಂದು ಒತ್ತಾಯಿಸಿದರು.
ಪಯಣ ಸಂಸ್ಥೆಯ ಕಾರ್ಯದರ್ಶಿ ಚಾಂದಿನಿ ಮಾತನಾಡಿ, ಕಳೆದ 20 ವರ್ಷಗಳ ಹೋರಾಟದ ಫಲ ದೀಪು ಬುದ್ಧೆ ಅಂತವರು ತೃತೀಯ ಲಿಂಗಿಯಾಗಿ ಗುರುತಿಸಿಕೊಂಡು ಶಿಕ್ಷಣ ಪಡೆಯಲು ಕಾರಣ. ಸಮುದಾಯದ ಇನ್ನಷ್ಟು ಮಂದಿಗೆ ದೀಪು ಮಾದರಿಯಾಗಿ ನಿಲ್ಲಲಿದ್ದು ಮತ್ತಷ್ಡು ಸಾಧನೆ ಮಾಡಲು ತಾವುಗಳು ಜತೆಯಲ್ಲಿರುತ್ತೇವೆ ಎಂದರು.
ಶಿಕ್ಷಣದ ಹಸಿವು, ಓದುವ ಛಲವೊಂದಿದ್ದರೇ ಉಳಿದೆಲ್ಲವೂ ನಗಣ್ಯ ಎಂಬುದಕ್ಕೆ ದೀಪು ಉದಾಹರಣೆಯಾಗಿ ನಿಲ್ಲುತ್ತಾರೆ. ಅವಮಾನ, ಕೀಳರಿಮೆಯಿಂದ ಸನ್ಮಾನದವರೆಗೂ ಬಂದಿರುವ ಈಕೆ ಮತ್ತಷ್ಡು ಸಾಧಿಸಲಿ ಎಂದು ಆಶಿಸೋಣ
ಇದನ್ನೂ ಓದಿ: ಬಾಸುಂಡೆ ಬರುವ ರೀತಿ ಹೊಡೆದು ಕ್ಷಮೆ ಕೇಳಿದ ಶಿಕ್ಷಕಿ!