ಚಾಮರಾಜನಗರ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಟ್ರ್ಯಾಕ್ಟರ್ ಪರೇಡ್ ಬಂಬಲಿಸಿ ಚಾಮರಾಜನಗರದ ನೂರಾರು ರೈತರು ಪ್ರವಾಸಿ ಮಂದಿರದಲ್ಲಿ ಜಮಾಯಿಸಿ ಮೆರವಣಿಗೆ ನಡೆಸಲು ಮುಂದಾದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಕ್ಸಮರ ನಡೆಯಿತು.
ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ ರೈತರ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ, ಮೋದಿ ಅಣಕು ಶವಯಾತ್ರೆಗೆ ಮುಂದಾದಾಗ, ಶಾಂತಿಯುತ ಪ್ರತಿಭಟನೆಗಷ್ಟೇ ಅನುಮತಿ ನೀಡಲಾಗಿದೆ, ಅಣಕು ಶವಯಾತ್ರೆಗಲ್ಲ ಎಂದು ಶವಯಾತ್ರೆಗೆ ಪೊಲೀಸರು ಅಡ್ಡಿಪಡಿಸಿದರು. ಇದರಿಂದ, ರೊಚ್ಚಿಗೆದ್ದ 200ಕ್ಕೂ ಹೆಚ್ಚು ರೈತರು ನಾವು ಶವಯಾತ್ರೆ ನಡೆಸಿಯೇ ತೀರುತ್ತೇವೆ ಎಂದು ಪ್ರವಾಸಿ ಮಂದಿರದ ಮುಂಭಾಗವೇ ಧರಣಿ ಕುಳಿತು ಕೇಂದ್ರ ಸರ್ಕಾರದ ಜೊತೆಗೆ ಪೊಲೀಸರ ವಿರುದ್ಧವೂ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿಂದೆ ರೈತರ ಹಿತಾಸಕ್ತಿಗೆ ಧಕ್ಕೆ ಬಂದ ವೇಳೆ ಎಚ್ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆ ನಡೆಸಿದ್ದೇವೆ. ಆಗ ಇಲ್ಲದ ನಿರ್ಬಂಧ ಈಗೇಕೆ?, ಪ್ರಧಾನಿ ವಿರುದ್ಧ ಮಾತನಾಡಿದರೇ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ, ಪ್ರತಿಭಟನೆ ಮಾಡಲು ನಿರ್ಬಂಧ ಹೇರುತ್ತಿದ್ದಾರೆ ಎಂಬುದು ಇಂದು ಸ್ಪಷ್ಟವಾಗಿದೆ ಎಂದು ರೈತ ಮುಖಂಡ ಡಾ.ಗುರುಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.