ಕೊಳ್ಳೇಗಾಲ : ಆಗಸ್ಟ್ 5ರಂದು ಅಧಿಕೃತವಾಗಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.
ಬಿಜೆಪಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ನಿವಾಸದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯನ್ನು ಚಾಮರಾಜನಗರ, ಮೈಸೂರು ಹಾಗೂ ಕೊಳ್ಳೇಗಾಲ ಭಾಗದಲ್ಲಿ ಭದ್ರಪಡಿಸುವ ಕೆಲಸವನ್ನು ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ ಜೊತೆ ಸೇರಿ ಮಾಡುತ್ತೇವೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಎನ್.ಮಹೇಶ್ ಪಕ್ಷಕ್ಕೆ ಸೇರಿರುವುದು ಸಂತಸ ತಂದಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಒಗ್ಗೂಡಿ ಪಕ್ಷ ಕಟ್ಟುತ್ತೇವೆ. ಪಕ್ಷ ನಂಬಿ ಬಂದ ಎನ್.ಮಹೇಶ್‌ಗೆ ಬಿಜೆಪಿ ಆಸರೆಯಾಗುತ್ತದೆ ಎಂದು ಹೇಳಿದರು.
ನಾನೇನು ರಿಯಾಕ್ಟ್ ಮಾಡೊಲ್ಲ : ಬಿಜೆಪಿ ಸೇರ್ಪಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತಿವಾಗಿದೆ ಎಂಬ ಪ್ರಶ್ನಗೆ ಪ್ರತಿಕ್ರಿಸಿದ ಅವರು, ಅವರವರ ಭಾವಕ್ಕೆ ಅವರವರ ಭಕುತಿಗೆ ಇರುತಿಹನು ಶಿವಯೋಗಿ. ಹರಿಯ ಭಕ್ತರಿಗೆ ಹರಿ, ಹರನ ಭಕ್ತರಿಗೆ ಹರ. ಅವರು ಏನಾದ್ರೂ ಹೇಳಲಿ, ನಾನು ತಲೆ ಕೆಡೆಸಿಕೊಳ್ಳುವುದಿಲ್ಲ, ನನ್ನನು ಋಣಾತ್ಮಕವಾಗಿ ಬಿಂಬಿಸಲು ಹೊರಟವರಿಗೂ ಮಲೆ ಮಹದೇಶ್ವರ ಒಳ್ಳೇಯದನ್ನೆ ಮಾಡಲಿ ಎಂದರು.