ಚಾಮರಾಜನಗರ: ಕೆಬ್ಬೇಕಟ್ಟೆ ಶನೀಶ್ವರ ದೇಗುಲದಲ್ಲಿ ದಲಿತ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿರುವ ಆರೋಪ ಹೊತ್ತಿರುವ 6 ಮಂದಿಯ ಜಾಮೀನು ಅರ್ಜಿ ವಿಚಾರಣೆಯನ್ನು ಜಿಲ್ಲಾ ಪ್ರಧಾನ ನ್ಯಾ. ಜಿ.ಬಸವರಾಜ ಜು. 2ಕ್ಕೆ ಮುಂದೂಡಿ, ನ್ಯಾಯಾಂಗ ಬಂಧನವನ್ನು ಜು. 11ರವರೆಗೆ ವಿಸ್ತರಿಸಿದರು.
6 ಮಂದಿ ಆರೋಪಿಗಳ ಪರ ಅರಳಿಕಟ್ಟೆ ಸಿದ್ದರಾಜು ವಾದ ಮಂಡಿಸಿ, ದಲಿತ ಯುವಕನನ್ನು ಬೆತ್ತಲೆಗೊಳಿಸಿಲ್ಲ. ಜೂ. 2ರ ರಾತ್ರಿಯೇ ರಾಘವಪುರದಲ್ಲಿ ಆತ ಬೆತ್ತಲಾಗಿದ್ದ ಎಂದು ಕೆಲವು ಸಿಸಿಟಿವಿಯ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಜೂ. 2ರಂದು ರಾಘವಪುರದಲ್ಲಿ ದರೋಡೆಗೊಳಗಾದ ಎಂದು ಹೇಳಿದ್ದಾರೆ. ಹಾಗಾದರೆ, 5 ಕಿ.ಮೀ. ದೂರದ ಬೇಗೂರು ಪೊಲೀಸ್ ಠಾಣೆಯಲ್ಲಿ ಆತ ಏಕೆ ದೂರು ನೀಡದೇ ರಾಘವಪುರದಿಂದ 15 ಕಿ.ಮೀ. ದೂರದ ಗುಂಡ್ಲುಪೇಟೆಗೇಕೆ ಬಂದ. ಶನೀಶ್ವರ ದೇಗುಲದ ಅರ್ಚಕ ಈತ ಬೆತ್ತಲಾಗಿದ್ದನ್ನು ಕಂಡು ಜೈನ ಗುರುಗಳು ಎಂದುಕೊಂಡಿದ್ದಾರೆ ಎಂದು ತಮ್ಮ ವಾದ ಮಂಡಿಸಿದರು.
ಇದಕ್ಕೆ ನ್ಯಾ. ಬಸವರಾಜು ಪ್ರತಿಕ್ರಿಯಿಸಿ, ಜೈನ ಗುರು ಎಂದು ತಿಳಿದುಕೊಂಡ ಮೇಲೆ ಸನ್ಮಾನ ಮಾಡದೇ ಅಮಾನವೀಯವಾಗಿ ಬೆತ್ತಲೆ ಮೆರವಣಿಗೆ ಏಕೆ ಮಾಡಿದರು ಎಂದು ಪ್ರಶ್ನಿಸಿದರು. ಬೆತ್ತಲೆ ಮೆರವಣಿಗೆ ನಡೆಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಆ ರೀತಿ ಬಿಂಬಿಸಲಾಗಿದೆ. ಜೂ. 3ರಂದು ನಡೆದ ಘಟನೆಗೆ ಒಂದು ವಾರದ ಬಳಿಕ ದೂರು ನೀಡಿದ್ದಾರೆ. ತಮ್ಮ ಮಗ ಮಾನಸಿಕ ಅಸ್ವಸ್ಥ ಎಂದು ಯುವಕನ ತಂದೆ ಹೇಳಿಕೆ ನೀಡಿದ್ದಾರೆ ಎಂದು ವಾದ ಮಂಡಿಸಿದರು.
ಸರ್ಕಾರಿ ಅಭಿಯೋಜಕಿ ತಕರಾರು ವಾದ ಮಂಡಿಸಿ, ಆತ ಗಾಯಗೊಂಡು ಆಸ್ಪತ್ರೆಗೆ ದಾಖಲಾದ್ದರಿಂದ ದೂರು ನೀಡಲು ತಡವಾಯಿತು. ಈಗಲೂ ಆತ ಮೈಸೂರಿನ ಸೆಂಟ್ ಮೇರಿಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆಯನ್ನು ಜು. 2ಕ್ಕೆ ಮತ್ತು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜು. 11ಕ್ಕೆ ವಿಸ್ತರಿಸಿದರು.
ದಲಿತ ಯುವಕನನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಮರಕ್ಕೆ ಕಟ್ಟಿ ಥಳಿಸಿದ್ದಾರೆಂದು ಶಿವಪ್ಪ, ಬಸವರಾಜು, ಮಾಣಿಕ್ಯ, ಸತೀಶ, ಪುಟ್ಟಸ್ವಾಮಿ, ಚನ್ನಕೇಶವಮೂರ್ತಿ ಎಂಬುವವರು ಆರೋಪ ಹೊತ್ತಿದ್ದು, ಘಟನೆ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಗಳೂ ಅಮಾನತುಗೊಂಡಿದ್ದಾರೆ.