ಕೊಳ್ಳೇಗಾಲ : ರಾತ್ರೋರಾತ್ರಿ ಕೊರೊನಾ ನಿಗ್ರಹಕ್ಕೆಂದು ಭಕ್ತೆಯೋರ್ವಳು ಪ್ರತಿಷ್ಠಾಪನೆ ಮಾಡಿದ್ದ ವಿವಾದಾತ್ಮಕ ಕೊರೊನಾ ಮಾರಮ್ಮನ ದೇವಾಲಯವನ್ನು ತಾಲೂಕು ಆಡಳಿತ ತೆರವುಗೊಳಿಸಿದೆ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಲೊಕ್ಕನಹಳ್ಳಿ ರಸ್ತೆಯ ಬೋಳುಗುಡ್ಡೆ ಸಮೀಪವಿರುವ ಚಾಮುಂಡೇಶ್ವರಿ ದೇವಾಲಯದ ಬಳಿ ಗುರುವಾರ ರಾತ್ರಿ 1 ಗಂಟೆಗೆ ಕೊರೊನಾ ಮಾರಮ್ಮನ ದೇವಸ್ಥಾನವನ್ನು ಕೊರೊನಾ ತಡೆಗಟ್ಟುವ ಉದ್ದೇಶದಿಂದ ಮಧುವನಹಳ್ಳಿ ಮಾಜಿ ಗ್ರಾಪಂ ಅಧ್ಯಕ್ಷೆ ಡಾ. ಯಶೋಧಮ್ಮ ನಿರ್ಮಿಸಿ ಅವರಷ್ಟಕ್ಕೆ ಪೂಜಾ ಕೈಂಕರ್ಯವನ್ನು ಮಾಡಿದ್ದರು.
ಬಳಿಕ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾದ ಕೊರೊನಾ ಮಾರಮ್ಮನ ದೇವಾಲಯದ ಸ್ಥಾಪನೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು. ಕೊರೊನಾ ಸೋಂಕು ವಿಜ್ಞಾನಕ್ಕೆ ಸಾವಾಲಾಗಿರುವ ಪ್ರಸ್ತುತ ದಿನದಲ್ಲಿ ಜನರು ಪ್ರಾಣ ಉಳಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ಮಾರಮ್ಮನ ದೇವಾಲಯವನ್ನು ತೆರೆದಿರುವುದು ಏಕೆ? ಇದರ ಹಿಂದಿನ ನಿಖರ ಉದ್ದೇಶವೇನಿರಬಹುದು, ಪ್ರಚಾರಕ್ಕೆ ಈ ರೀತಿ ಮಾಡಿದ್ದಾರಾ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು.
ವಿಚಾರ ತಿಳಿದ ತಾಲೂಕು ದಂಡಾಧಿಕಾರಿ ಕುನಾಲ್ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಶೋಕ್ರೊಡನೆ ರಾತ್ರಿ ಸುಮಾರು 9 ಗಂಟೆಗೆ ಸ್ಥಳಕ್ಕೆ ತೆರಳಿ, ಕೊರೊನಾ ಮಾರಮ್ಮ ದೇವಾಲಯದವನ್ನು ಪ್ರತಿಷ್ಠಾಪನೆ ಮಾಡಿದ ಡಾ.ಯಶೋಧಮ್ಮಗೆ ದೇವಸ್ಥಾನ ನಿರ್ಮಾಣ ಮಾಡಲು ನಿಮಗೆ ಅನುಮತಿ ಕೊಟ್ಟಿದ್ದು ಯಾರು?, ಇದನ್ನೆಲ್ಲಾ ಪ್ರಚಾರಕ್ಕಾಗಿ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಭಕ್ತೆ ಯಶೋಧಮ್ಮ ಸರ್ ಜನರಿಗೆ ಒಳಿತಾಗಲಿ ಎಂಬ ಉದ್ದೇಶಕ್ಕೆ ದೇವಸ್ಥಾನ ತೆರೆಯಲಾಗಿದೆ ಅಷ್ಟೇ, ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಕೂಡಲೇ ದೇವಸ್ಥಾನವನ್ನು ತೆರವುಗೊಳಿಸಬೇಕು. ಇನ್ನು ಮುಂದೆ ಇಂತಹ ಮೌಢ್ಯ ಬಿತ್ತುವ ಪ್ರಯತ್ನಗಳು ಜರುಗಬಾರದು. ಇಂತಹ ಘಟನೆ ಮರುಕಳಿಸಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತೆ ಎಂದು ತಹಶೀಲ್ದಾರ್ ಕುನಾಲ್ ಎಚ್ಚರಿಸಿದ್ದಾರೆ. ಸದ್ಯ ದೇವಸ್ಥಾನವನ್ನು ತೆರವುಗೊಳಿಸಲಾಗಿದೆ.