ಮಂಗಳೂರು: ನಗರದ ಎಂಆರ್ಪಿಎಲ್ ಸಂಸ್ಥೆಯಲ್ಲಿ ಉದ್ಯೋಗ ನೇಮಕಾತಿಗೆ ಕರ್ನಾಟಕದಿಂದ 6 ಸಾವಿರ ಅರ್ಜಿ ಬಂದಿದ್ದರೂ, ಕೇವಲ 14 ಮಂದಿಗೆ ಮಾತ್ರ ಉದ್ಯೋಗಾವಕಾಶ ದೊರೆತಿದೆ. ಇದು ಖಂಡನೀಯ, ಅಕ್ಷಮ್ಯ ಅಪರಾಧ. ಆದ್ದರಿಂದ ತಕ್ಷಣ ಕೇಂದ್ರ ಸರಕಾರದ ಸಚಿವರು, ಜಿಲ್ಲೆಯ ಸಂಸದರು ಮಧ್ಯಪ್ರವೇಶಿಸಿ ಈಗಾಗಲೇ ಆಯ್ಕೆ ಮಾಡಿರುವ 184 ಮಂದಿಗೆ ನೇಮಕಾತಿ ಪತ್ರ ಹೋಗುವ ಮೊದಲು ಪರಿಶೀಲನೆಯನ್ನು ಸ್ಥಗಿತಗೊಳಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಿಸಿಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ 184 ಮಂದಿಗೆ ಎಂಆರ್ಪಿಎಲ್ ಸಂಸ್ಥೆಯು ನೇಮಕಾತಿ ಪತ್ರ ಕಳುಹಿಸಿದೆ. ಇದು ಸಿ ದರ್ಜೆ ಹಾಗೂ ಡಿ ದರ್ಜೆಯ ಉದ್ಯೋಗಗಳಾಗಿದ್ದು, ಇದಕ್ಕೆ ಕರ್ನಾಟಕದ 6 ಸಾವಿರ ಮಂದಿ ಅರ್ಜಿ ಹಾಕಿದ್ದಾರೆ. ದ.ಕ.ಜಿಲ್ಲೆಯ 2 ಸಾವಿರ ಮಂದಿ ಅರ್ಜಿ ಹಾಕಿದ್ದಾರೆ. ಅದರಲ್ಲಿ 14 ಮಂದಿ ಮಾತ್ರ ಕರ್ನಾಟಕದವರು. ಅದರಲ್ಲಿ ದ.ಕ.ಜಿಲ್ಲೆಯವರು ಬರೀ ನಾಲ್ಕು ಮಂದಿ ಮಾತ್ರ ಇದ್ದಾರೆ ಎಂದು ಹೇಳಿದರು.
ನೇಮಕಾತಿಯ ಪರಿಶೀಲನೆ ಮಾತ್ರ ಉಳಿದಿದೆ. ಮತ್ತೆ ಈ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಈ ಉದ್ಯೋಗ ನಮ್ಮ ಯುವಕರಿಗೆ ದೊರಕಬೇಕು. ಅವಿಭಜಿತ ದ.ಕ.ಜಿಲ್ಲೆ ವಿದ್ಯಾವಂತರು, ಬುದ್ಧಿವಂತರ ಜಿಲ್ಲೆ ಎಂಬುದು ಬರೀ ಮಾತಿಗೆ ಮಾತ್ರ ಸೀಮಿತ ಆಗಬಾರದು. ಬೇರೆ ರಾಜ್ಯಗಳಲ್ಲಿ ಉದ್ಯೋಗಕ್ಕೆ ಸ್ಥಳೀಯರಿಗೆ ಅವಕಾಶ ಇರುವಾಗ ನಮ್ಮ ಜಿಲ್ಲೆಯಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಎಂಆರ್ಪಿಎಲ್ ಸಂಸ್ಥೆಯ ಉದ್ಯೋಗಾವಕಾಶದಲ್ಲಿ ಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯರಿಗೆ ಅವಕಾಶ ದೊರಕಬೇಕು. ಆದ್ದರಿಂದ ಎಂಆರ್ಪಿಎಲ್ನ ಈ ನೇಮಕಾತಿಯಲ್ಲಿ ಈಗ ಲಿಸ್ಟ್ನಲ್ಲಿ ಹೆಸರು ಇರುವವರಿಗೆ ಉದ್ಯೋಗ ದೊರಕಿದಲ್ಲಿ ನಮ್ಮ ಜಿಲ್ಲೆಯವರಿಗೆ ದೊಡ್ಡ ಮಟ್ಟದ ಅನ್ಯಾಯವಾಗಲಿದೆ. ಆದ್ದರಿಂದ ಸ್ಥಳೀಯ ಯುವಕರಿಗೆ ಉದ್ಯೋಗ ದೊರಕದಿದ್ದಲ್ಲಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಉಗ್ರವಾದ ಹೋರಾಟ ನಡೆಸಲಿದೆ. ಹಾಗಾಗಿ ನಮ್ಮ ಜಿಲ್ಲೆಯವರೇ ಕೇಂದ್ರ ಸಚಿವರು ಇದ್ದಾರೆ. ಅವರು ಇದರ ಮಧ್ಯಸ್ಥಿಕೆ ವಹಿಸಿ ಈಗಿನ ನೇಮಕಾತಿಯನ್ನು ರದ್ದುಪಡಿಸಿ ಸ್ಥಳೀಯರಿಗೆ ಉದ್ಯೋಗ ದೊರಕುವಂತಹ ಕಾರ್ಯ ಆದಷ್ಟು ಬೇಗ ಆಗಬೇಕು ಎಂದು ಮಿಥುನ್ ರೈ ಆಗ್ರಹಿಸಿದರು.