ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿನ 16.84 ಕೋಟಿ ರೂ.ಗಳ ಕಾಮಗಾರಿ ಉದ್ಘಾಟನೆ ಮತ್ತು 109.93 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಕೋವಿಡ್-19 ಹಿನ್ನೆಲೆ ಸಾಮಾಜಿಕ ಅಂತರ ಪಾಲನೆ ದೃಷ್ಟಿಯಿಂದ ರಂಗಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಯಾವುದೇ ರೀತಿಯ ಮೂಲ ಸೌಕರ್ಯಕ್ಕೆ ತೊಂದರೆಯಾಗದಿರಲೆಂದು ಸುಸಜ್ಜಿತ ಉಪಹಾರ ಮಂದಿರ, ಮಾಹಿತಿ ಕೇಂದ್ರ, ಶೌಚಾಲಯ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಪಾದಯಾತ್ರಿಗಳಿಗೆ ನೆರವಾಗಲು ಮೆಟ್ಟಿಲು ನಿರ್ಮಾಣ, ಅತಿಥಿ ಗೃಹ ಮತ್ತಿತ್ತರ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಜೊತೆಗೆ ಕೋವಿಡ್-19 ಹಿನ್ನೆಲೆ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಶ್ರೀಕ್ಷೇತ್ರ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ್ದು, ಸುಂದರ ಪರಿಸರವನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಭಕ್ತರು ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು ಎಂದು ಕರೆ ನೀಡಿದರು.
ಬಂಧಿಸಲು ಹೋದ ಪೊಲೀಸರ ಮೇಲೆಯೇ ಆರೋಪಿಗಳ ಸಹಚರರಿಂದ ಹಲ್ಲೆ! ವಿಡಿಯೋ
ಅರ್ಚಕರಿಗೆ ಪಿಂಚಣಿ: ಮುಜರಾಯಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ಮಾತನಾಡಿ, ಶೀಘ್ರದಲ್ಲೇ 34 ಸಾವಿರ ದೇಗುಲಗಳಲ್ಲಿನ ಅರ್ಚಕರಿಗೆ ಜೀವ ವಿಮೆ, ಪಿಂಚಣಿ ಸೌಲಭ್ಯ ನೀಡಲು ಸಿಎಂ ಕ್ರಮ ಕೈಗೊಳ್ಳುವರು. ಕೊರೊನಾದಿಂದಾಗಿ ನಿಂತು ಹೋದ ಸಪ್ತಪದಿ ಯೋಜನೆ ಮತ್ತೆ ಆರಂಭವಾಗಲಿದೆ.
ಮುಂದಿನ ಎರಡು ವಾರದಲ್ಲಿ ಚಾಮರಾಜನಗರಕ್ಕೆ ಬಂದು ಜಿಲ್ಲೆಯಲ್ಲಿ ಮೀನುಗಾರಿಕೆ ಅಭಿವೃದ್ಧಿ ಕುರಿತು ಸಭೆ ನಡೆಸಿ ಮೀನುಗಾರಿಕೆ ಅಭಿವೃದ್ಧಿ ಕುರಿತು ಯೋಜನೆ ರೂಪಿಸಲಾಗುವುದು ಎಂದರು.
ಹೊಗಳಿಕೆಯ ಸುರಿಮಳೆ: ಯಡಿಯೂರಪ್ಪ ಸರ್ಕಾರದ ವೇಗದಂತೆ ಅಭಿವೃದ್ಧಿ ಕಾರ್ಯ ನಡೆದರೆ ಮುಂದಿನ 4-5 ವರ್ಷಗಳಲ್ಲಿ ಮಲೆಮಹದೇಶ್ವರ ಬೆಟ್ಟ ಶ್ರೇಷ್ಠ ಧಾರ್ಮಿಕ ಕ್ಷೇತ್ರವಾಗಲಿದೆ. ಮಠಗಳ ಕಷ್ಟ ತಿಳಿದು ಸಂಕಷ್ಟದ ಸಮಯದಲ್ಲೂ ಮಠಗಳಿಗೆ ಅನುದಾನದ ಹೊಳೆ ಹರಿಸಿದ್ದು, ಸಾಧು ಸಂತರ ಆಶೀರ್ವಾದ ಸದಾ ಅವರ ಮೇಲಿರಲಿದೆ ಎಂದರು.
ರಾಜಕಾರಣದಲ್ಲಿ ಸಾಮಾಜಿಕ ನ್ಯಾಯ ಎಲ್ಲರಿಗೂ ಕಲ್ಪಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಯಡಿಯೂರಪ್ಪ ಪಾತ್ರವಾಗಿದ್ದಾರೆ. ಇತಿಹಾಸದಲ್ಲಿ ಅವರ ಹೆಸರು ಅಜರಾಮರ. ರಾಜಕೀಯದಲ್ಲಿನ ಸಿಡಿಲು-ಗುಡುಗು ಮಾಯವಾಗಿ ತಂಪನೆಯ ಮಳೆಯಂತೆ ಯಡಿಯೂರಪ್ಪ ಜನರಿಗೆ ಆಧಾರವಾಗಿದ್ದಾರೆ ಎಂದರು.
ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಯಡಿಯೂರಪ್ಪ ಯಾವಾಗ ಸಿಎಂ ಆಗಿರುತ್ತಾರೋ ಆಗೆಲ್ಲಾ ಮಳೆಯಾಗುತ್ತದೆ. ಅವರು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಒಣ ಬರ ಎಂದೂ ಕಂಡಿಲ್ಲ. ಮಳೆ ಬಂದರೆ ಕೇಡಲ್ಲ-ಮಗ ಉಂಡರೆ ಕೆಟ್ಟಿಲ್ಲ ಎಂದು ಗಾದೆ ಹೇಳಿ ಸಿಎಂ ಅವರನ್ನು ಹೊಗಳಿದರು.
ಸುತ್ತೂರು ಶ್ರೀಗಳು ಮಾತನಾಡಿ, ಮಲೆಮಹದೇಶ್ವರ ಎಲ್ಲಾ ಇತಿಮಿತಿಗಳನ್ನು ದಾಟಿರುವ ಭಗವಂತ. ಎಲ್ಲಾ ವರ್ಗದ, ಎಲ್ಲಾ ಪ್ರದೇಶಗಳ ಜನರು ಆರಾಧಿಸುತ್ತಾರೆ. ಶಿಷ್ಟ ಸಾಹಿತ್ಯ ಮತ್ತು ಜನಪದ ಸಾಹಿತ್ಯದಲ್ಲಿ ಮಹದೇಶ್ವರ ಹಾಸುಹೊಕ್ಕಾಗಿದ್ದಾರೆ ಎಂದರು. ಸಾಮಾನ್ಯರಂತೆ 5 ದಿನ ದುಡಿದು ಎರಡು ದಿನ ರಿಲ್ಯಾಕ್ಸ್ ಮಾಡುವವರು ರಾಜಕಾರಣಿಗಳಲ್ಲ. ಸಿಎಂ-ಸಚಿವರು ಪ್ರತಿ ನಿಮಿಷವೂ ಒತ್ತಡ ಅನುಭವಿಸುತ್ತಿರುತ್ತಾರೆ. ಯಡಿಯೂರಪ್ಪ 365 ದಿನವೂ ಸುತ್ತಲಿದ್ದು, ದೇಗುಲಗಳಿಗೆ ಬಂದಾಗ ಮಾತ್ರ ಜಂಜಾಟ ಮರೆತು ಪ್ರಶಾಂತ ಭಾವ ಅನುಭವಿಸುತ್ತಾರೆ ಎಂದು ಹೇಳಿದರು.
ರಸ್ತೆ ಮೂಲಕ ಬೆಂಗಳೂರಿಗೆ: ಬುಧವಾರ ಸಂಜೆ ಹೆಲಿಕಾಪ್ಟರ್ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಸಿಎಂ ಪ್ರತಿಕೂಲ ಹವಾಮಾನದಿಂದಾಗಿ ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.