ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಮ್ಲಜನಕ ದುರಂತಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಚಾಮರಾಜನಗರ ಎಸ್ಪಿಗೆ ವಕೀಲರೊಬ್ಬರು ದೂರು ನೀಡಿದ್ದಾರೆ.
ವಕೀಲ ಪುಟ್ಟಸ್ವಾಮಿ ಎಂಬುವರು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಸಚಿವರು ಮತ್ತು ಜಿಲ್ಲಾಡಳಿತ ಅಧಿಕಾರಿಗಳ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನದಿಂದಲೇ ಕೊರೊನಾ ಸೋಂಕಿತರು ಅಸುನೀಗಿದ್ದಾರೆ. ಆದ್ದರಿಂದ, ಮೃತಪಟ್ಟವರಿಗೆ 50 ಲಕ್ಷ ರೂ. ಪರಿಹಾರ ಮತ್ತು ಸಚಿವರು, ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕೊಟ್ಟು ಜೀವ ಉಳಿಸಬೇಕಾದ್ದು ಜಿಲ್ಲಾಡಳಿತ ಮತ್ತು ವೈದ್ಯರ ಕರ್ತವ್ಯ. ಆದರೆ, ತಮ್ಮ ಕಾರ್ಯವನ್ನೇ ಮರೆತು ನಿರ್ಲಕ್ಷ್ಯ ವಹಿಸಿದ್ದಾರೆ, ಸೋಂಕಿತರ ಸಾವಿಗೆ ಸಚಿವರು ಮತ್ತು ಅಧಿಕಾರಿಗಳೇ ಹೊಣೆ ಎಂದು ವಕೀಲ ಪುಟ್ಟಸ್ವಾಮಿ ಆರೋಪಿಸಿದ್ದಾರೆ.
ಸದ್ಯ, ದೂರು ನೀಡಿ ಸ್ವೀಕೃತಿ ಪತ್ರ ಪಡೆದಿರುವ ವಕೀಲ ಪುಟ್ಟಸ್ವಾಮಿ ಪೊಲೀಸರು ಕೈಗೊಳ್ಳುವ ಕ್ರಮದ ಬಳಿಕ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.