ಚಾಮರಾಜನಗರ: ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಸೋಮವಾರದಿಂದ ಕಠಿಣ ನಿಯಮಗಳು ಜಾರಿಗೆ ಬರಲಿದ್ದು ವಾಹನಗಳು ಜಪ್ತಿಯಾದರೆ ಹಿಂತಿರುಗಿಸಿ ಕೊಡುವುದಿಲ್ಲ ಎಂದು ಎಸ್ಪಿ ದಿವ್ಯಾ ಸಾರಾ ಥಾಮಸ್ ಎಚ್ಚರಿಸಿದ್ದಾರೆ.
ಲಾಕ್ಡೌನ್ ಅನುಷ್ಠಾನದ ಸಿದ್ಧತೆ ಕುರಿತು ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಪೊಲೀಸ್ ಇಲಾಖೆ ಲಾಕ್ಡೌನ್ ನಿಯಮ ಅನುಷ್ಠಾನಗೊಳಿಸಲು ಸಿದ್ಧವಾಗಿದ್ದು, ಆಸ್ಪತ್ರೆ ಮತ್ತು ಅನಿವಾರ್ಯ ಸಂದರ್ಭದಲ್ಲಷ್ಟೇ ವಾಹನ ಬಳಸಬೇಕು. ತರಕಾರಿ ತರಲು, ಹಾಲು ತರಲು ನಡೆದೇ ಬರಬೇಕು, ಇಲ್ಲದಿದ್ದಲ್ಲಿ ವಾಹನ ಜಪ್ತಿ ಮಾಡಲಿದ್ದು 14 ದಿನಗಳು ವಾಹನ ಹಿಂತಿರುಗಿಸುವುದಿಲ್ಲ. ಆದಷ್ಟು ಜನರು ಕೊರೊನಾ ಗಾಂಭೀರ್ಯತೆ ಅರಿಯಬೇಕೆಂದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 22 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ 7 ಅಂತಾರಾಜ್ಯಕ್ಕೆ ಸೇರಿದವುಗಳಾಗಿವೆ. ಲಾಕ್ಡೌನ್ ಬಗ್ಗೆ ಜಿಲ್ಲಾದ್ಯಂತ ಸಾಕಷ್ಟು ಅರಿವು ಮೂಡಿಸಿದ್ದು, ಅನಗತ್ಯವಾಗಿ ಸಂಚರಿಸದಂತೆ ಎಚ್ಚರಿಕೆ ನೀಡಲಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದಲೇ ನಿಯಮ ಜಾರಿಯಾಗಿರುವುದರಿಂದ ಜನತೆ ನಿಯಮ ಪಾಲಿಸಬೇಕು ಎಂದು ತಿಳಿಸಿದರು.