ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಒಂದು ದಿನ ಬಾಕಿಯಿದ್ದು ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ.
ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ಬಿ.ಬಿ.ಕಾವೇರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮತ ಎಣಿಕೆಯು ಬೇಡಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದ್ದು, ಬೆಳಗ್ಗೆ 8 ಗಂಟೆಗೆ ಮತ ಏಣಿಕೆ ಕಾರ್ಯ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ವಿದ್ಯುನ್ಮಾನ ಮತಯಂತ್ರದ ಮತ ಏಣಿಕೆಗೂ ಮೊದಲು ಅಂಚೆ ಮತ ಪತ್ರ ಏಣಿಕೆ ನಡೆಯಲಿದ್ದು ಈ ಬಾರಿ ವಿತರಣೆಯಾಗಿದ್ದ 5130 ಅಂಚೆ ಮತಪತ್ರಗಳಲ್ಲಿ 3223 ಅಂಚೆ ಮತಪತ್ರಗಳು ಬಂದಿದ್ದು, ಇದಕ್ಕಾಗಿ 4 ಟೇಬಲ್ ಸ್ಥಾಪಿಸಲಾಗಿದೆ, 310 ಸೇವಾ ಮತದಾರರಲ್ಲಿ 200 ಮತಗಳು ಸ್ವೀಕೃತಗೊಂಡಿವೆ ಎಂದು ತಿಳಿಸಿದರು.
ಹೆಚ್.ಡಿ. ಕೋಟೆ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್, ನಂಜನಗೂಡು ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್, ವರುಣ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್, ಟಿ. ನರಸೀಪುರ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 6 ಟೇಬಲ್ +6 ಟೇಬಲ್‌ಗಳಲ್ಲಿ ಸಿವಿಲ್ ಬ್ಲಾಕ್ ನೆಲಮಹಡಿಯಲ್ಲಿ ನಡೆಯಲಿದ್ದು, ಹನೂರು ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್, ಕೊಳ್ಳೇಗಾಲ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್, ಚಾಮರಾಜನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್, ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್‌ಗಳಲ್ಲಿ ಮೆಕ್ಯಾನಿಕಲ್ ಬ್ಲಾಕ್ 1ನೇ ಮಹಡಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಒಟ್ಟು 110 ಟೇಬಲ್‌ಗಳಲ್ಲಿ 21 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ಈ ವರಗೆ 400 ಮಂದಿ ಏಜೆಂಟರುಗಳನ್ನು ನೇಮಕ ಮಾಡಲಾಗಿದ್ದು, 133 ಮತ ಎಣಿಕೆ ಮೇಲ್ವಿಚಾರಕರು,133 ಮಂದಿ ಎಣಿಕೆ ಸಹಾಯಕರು, 146 ಮಂದಿ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಕ ಮಾಡಲಾಗಿದೆ. 4 ಮಂದಿ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದ್ದು, ಹೆಚ್.ಡಿ.ಕೋಟಿ ಮತ್ತು ನಂಜನಗೂಡು, ವರುಣ ಮತ್ತು ಟಿ. ನರಸೀಪುರ, ಹನೂರು ಮತ್ತು ಕೊಳ್ಳೇಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಾಗಿ ವಿಂಗಡಿಸಿ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದರು.
ಎಸ್ ಪಿ ಧರ್ಮೇಂದರ್ ಕುಮಾರ್ ಆರ್. ಮೀನಾ ಮಾತನಾಡಿ, ಮತ ಎಣಿಕೆ ಕೇಂದ್ರಕ್ಕೆ ನಿಯೋಜನೆಗೊಂಡವರಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದ್ದು, ಗುರುತಿನ ಚೀಟಿ ಇರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು, ಗುರುತಿನ ಚೀಟಿ ಇಲ್ಲದ ಯಾರನ್ನು ಒಳಗಡೆ ಬಿಡಲಾಗುವುದಿಲ್ಲ. ಗುರುತಿನ ಚೀಟಿ ನೀಡಿರುವ ಪಕ್ಷಗಳ ಏಜೆಂಟರುಗಳು ಮಾತ್ರ ಏಣಿಕೆ ಕೇಂದ್ರಕ್ಕೆ ಬರಬಹುದು ಎಂದರು.
ಮತಯಂತ್ರಗಳನ್ನು ಶೇಖರಣೆ ಮಾಡಿರುವ ಭದ್ರತಾ ಕೊಠಡಿಗೆ 3 ಪಾಳಯದಲ್ಲಿ ಭದ್ರತೆಯನ್ನು ಒದಗಿಸಲಾಗಿದ್ದು, ಜಿಲ್ಲಾ ಪೊಲೀಸ್ ಸೇರಿ 200 ರಕ್ಷಣಾ ಸಿಬ್ಬಂದಿ ವರ್ಗದವರಿಂದ ಭದ್ರತೆ ನೀಡಲಾಗಿದೆ. 3 ಮಂದಿ ಡಿವೈಎಸ್‌ಪಿ, 3 ಕೆಎಸ್‌ಆರ್‌ಪಿ ಪ್ಲಟೂನ್‌ಗಳು, 5 ಡಿಎಆರ್ ತಂಡಗಳನ್ನು ಒಳಗೊಂಡಿದ್ದು, ಹೆಚ್ಚುವರಿಯಾಗಿ 250 ಹೋಂ ಗಾರ್ಡ್‌ಗಳನ್ನು ಮತ ಎಣಿಕೆ ಕೇಂದ್ರಗಳ ವ್ಯಾಪ್ತಿ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದ್ದು, ಉಳಿದಂತೆ ಜಿಲ್ಲಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 40 ಸಹಾಯಕ ಪಿಎಸ್ಐ ನೇತೃತ್ವದಲ್ಲಿ ಪ್ಯಾಟ್ರೋಲಿಂಗ್ ಮತ್ತು ಪಿಕೆಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿಲ್ಲಾದ್ಯಂತ ಸಿಆರ್‌ಪಿ ಕಲಂ 144 ರ ಪ್ರಕಾರ ಮೇ 23ರ ಬೆಳಗ್ಗೆ 6ರಿಂದ ಮೇ 24 ಮಧ್ಯರಾತ್ರಿ 12ರ ವರಗೆ ನಿಷೇದಾಜ್ಞೆ ಹೊರಡಿಸಲಾಗಿದ್ದು, ಮೇ 22ರ ಮಧ್ಯರಾತ್ರಿಯಿಂದ ಮೇ.23ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.