ಚಾಮರಾಜನಗರ: ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ಹೊರಹಾಕಿದರು.
ಜಿ.ಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ ಮಾತಾನಾಡಿ, ತಾಲೂಕು ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಇಒಗಳು ಜಿಲ್ಲಾ ಪಂಚಾಯತ್ ಸದಸ್ಯರುಗಳು ಮತ್ತು ಜನಪ್ರತಿನಿಧಿಗಳಿಗೆ ತಿಳಿಸುತ್ತಿಲ್ಲ. ಶಿಷ್ಟಾಚಾರದ ಅನ್ವಯ ಚುನಾಯಿತ ಪ್ರತಿನಿಧಿಗಳಿಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಅಧಿಕಾರಿಗಳು ಅದ್ಯಾವುದನ್ನೂ ಪಾಲಿಸದೇ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಜಿ.ಪಂ. ಸದಸ್ಯರು ಕಿಡಿಕಾರಿದರು.
ಸ್ಥಾಯಿಸಮಿತಿ ಅಧ್ಯಕ್ಷೆ ಉಮಾವತಿ ಶಿವಮ್ಮ ಮಾತಿಗೆ ದನಿಗೂಡಿಸಿದರು. ಕೊಳ್ಳೆಗಾಲದಲ್ಲಿ ನಡೆದ ತಾ.ಪಂ. ಸಭೆಗೆ ಜಿ.ಪಂ.ಸದಸ್ಯರನ್ನು ಆಹ್ವಾನಿಸಿಲ್ಲ. ತಾಲೂಕು ಮಟ್ಟದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿಯನ್ನು ತಾಲೂಕು ಮಟ್ಟದ ಅಧಿಕಾರಿಗಳು ನೀಡುವುದಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೂ ಕೂಡ ಕರೆಯುವುದಿಲ್ಲ ಎಂದು ಆರೋಪಿಸಿದರು.
ಬಳಿಕ ಸಿಇಒ ಕೆ.ಎಸ್.ಲತಾ ಕುಮಾರಿ ಮಾತನಾಡಿ, ಶಿಷ್ಟಾಚಾರ ಭಾರತದ ಪ್ರಜಾಪ್ರಭುತ್ವದ ಭಾಗವಾಗಿದೆ. ಎಲ್ಲಾ ಕಾರ್ಯಕ್ರಮಗಳಲ್ಲೂ ಶಿಷ್ಟಾಚಾರ ಪಾಲಿಸುವಂತೆ ಸರ್ಕಾರದ ನಿರ್ದೇಶನವಿದೆ. ಆದರೂ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸುವುದು ಸರಿಯಲ್ಲ. ಕಾರ್ಯಕ್ರಮಗಳು ನಡೆಯುವ ಕನಿಷ್ಟ ಹತ್ತು ದಿನಗಳ ಮೊದಲೇ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಮುಂದಿನ ಬಾರಿ ಶಿಷ್ಟಾಚಾರ ಉಲ್ಲಂಘಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.