ಚಾಮರಾಜನಗರ: ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ರಸ್ತೆ ದುರಸ್ಥಿ ಹಿನ್ನಲೆ ಸ್ಥಗಿತಗೊಂಡಿದ್ದ ಬಸ್ ಸಂಚಾರ 13 ದಿನಗಳ ಬಳಿಕ ಮತ್ತೆ ಆರಂಭಗೊಂಡಿದೆ.
ಇತ್ತೀಚೆಗೆ ಸುರಿದ ಮಳೆಗೆ ಗೋಪಾಲಸ್ವಾಮಿ ಬೆಟ್ಟದ ಹಲವು ಕಡೆ ರಸ್ತೆ ಕೊರೆದು ಹಳ್ಳಗಳಾಗಿದ್ದ ಕಾರಣ ಅ.16ರ ಭಾನುವಾರದಂದು ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸಧ್ಯ ಅಧಿಕಾರಿಗಳು ಕೊರೆದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದು, ಎರಡು ಮಿನಿ ಬಸ್ಗಳ ಸಂಚಾರ ಮತ್ತೆ ಆರಂಭಗೊಂಡಿದೆ. ವಾರಾಂತ್ಯ ಹಿನ್ನೆಲೆ ಬೆಟ್ಟಕ್ಕೆ ಪ್ರವಾಸಿಗರು, ಭಕ್ತರ ದಂಡೇ ಹರಿದು ಬರುತ್ತಿದ್ದು ಗೋಪಾಲಸ್ವಾಮಿ ಬೆಟ್ಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಧ್ಯಾಹ್ನವಾದರೂ ಮಂಜು ಮುಸುಕಿರುವ ವಾತಾವರಣ ಜನರನ್ನು ಆಕರ್ಷಿಸುತ್ತಿದೆ.
ರಸ್ತೆ ದುರಸ್ತಿಗೊಂಡ ಹಿನ್ನೆಲೆ ಬಸ್ ಸಂಚಾರ ಆರಂಭಗೊಂಡಿದ್ದು ಪ್ರವಾಸಿಗರು ಹಾಗೂ ಭಕ್ತರು ಬೆಟ್ಟಕ್ಕೆ ಎಂದಿನಂತೆ ಆಗಮಿಸುತ್ತಿದ್ದಾರೆ ಎಂದು ಗೋಪಾಲಸ್ವಾಮಿ ಬೆಟ್ಟದ ಅರ್ಚಕ ಕೆ.ವಿ.ಗೋಪಾಲಕೃಷ್ಣ ಭಟ್ ತಿಳಿಸಿದರು.
ಇದನ್ನೂ ಓದಿ: ವಾರಾಂತ್ಯಕ್ಕೆ ವರುಣಾಘಾತ: ಗೋಪಾಲಸ್ವಾಮಿ ಬೆಟ್ಟದ ರಸ್ತೆ ಕೊರಕಲು, ಸಂಚಾರ ನಿರ್ಬಂಧ