ಚಾಮರಾಜನಗರ: 4 ದಿನದ ಹಿಂದೆ ಅಜ್ಜಿ ಸತ್ತಿದ್ದರಿಂದ ಒಂದೇ ಕುಟುಂಬದ ಮೂವರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದರು. ಕೊನೆಗೂ ಅಧಿಕಾರಿಗಳ ಮನವೊಲಿಕೆಯಿಂದ ಪರೀಕ್ಷೆ ಬರೆದ ಘಟನೆ ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಮಧುವನ ಹಳ್ಳಿ ಗ್ರಾಮದ ವಿದ್ಯಾರ್ಥಿನಿ ಪಾರ್ವತಿಯ ಅಜ್ಜಿ ಗೌರಮ್ಮ 4 ದಿನದ ಹಿಂದೆ ನಿಧನರಾಗಿದ್ದರು. ಈ ದುಃಖದಲ್ಲಿ ಪಾರ್ವತಿ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದಳು. ಈಕೆಯ ಸಂಬಂಧಿಗಳಾದ ಪ್ರೀತಿ ಮತ್ತು ಪುಷ್ಪ ಪಾಲಕರು ಕೊರೊನಾ ಭೀತಿಯಿಂದ ಪರೀಕ್ಷೆಗೆ ಕಳುಹಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ.
ಬೆಳಗ್ಗೆ ಹಾಜರಾತಿ ತೆಗೆದುಕೊಳ್ಳುವ ವೇಳೆ ಗೈರಾದ ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿ ಪಡೆದು ವಿಚಾರಿಸಿದಾಗ ಅಜ್ಜಿ ಸಾವು, ಕೊರೊನಾ ಭೀತಿ ಎಂಬುದು ಗೊತ್ತಾಗಿದೆ. ವಿದ್ಯಾರ್ಥಿನಿಯರ ಮನೆಗೆ ಕೊಳ್ಳೇಗಾಲ ಬಿಇಒ ಚಂದ್ರಪಾಟೀಲ್ ಭೇಟಿ ನೀಡಿ ಪಾಲಕರ ಮನವೊಲಿಸಿ ತಮ್ಮ ವಾಹನದಲ್ಲೇ ಸಿಂಗಾನಲ್ಲೂರು ಪರೀಕ್ಷಾ ಕೇಂದ್ರಕ್ಕೆ ಕರೆ ತಂದು ಪರೀಕ್ಷೆ ಬರೆಸಿದ್ದಾರೆ.
ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ್ದಾರೆ. ಒಟ್ಟಿನಲ್ಲಿ ಕೊರೊನಾ ಆತಂಕ ಮತ್ತು ಅಜ್ಜಿ ಸಾವಿನ ನೋವಿನಲ್ಲಿದ್ದ ವಿದ್ಯಾರ್ಥಿಗಳ ಕೈಯಲ್ಲಿ ಇಂಗ್ಲಿಷ್ ವಿಷಯ ಪರೀಕ್ಷೆ ಬರೆಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.