ಚಾಮರಾಜನಗರ: 2022ನೇ ಸಾಲಿನಲ್ಲಿ ಅವಧಿ ಮುಕ್ತಾಯವಾಗಿರುವ ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಇಂದು ಬೆಳಗ್ಗೆ 7 ರಿಂದಲೇ ಚುನಾವಣೆ ನಡೆಯುತ್ತಿದೆ. ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ 28 ಅಭ್ಯರ್ಥಿಗಳು ಹಾಗೂ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದ 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಚಾಮರಾಜನಗರ ಮತ್ತು ಯಳಂದೂರು ತಾಲೂಕುಗಳು ಒಳಪಡಲಿವೆ. ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 135 ಮತಗಟ್ಟೆಗಳಿವೆ. ಒಟ್ಟು 1,49,665 ಮತದಾರರಿದ್ದಾರೆ. ಈ ಪೈಕಿ 1,11,636 ಪುರುಷರು ಮತ್ತು 38,029 ಮಹಿಳಾ ಮತದಾರರು. ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ, 61 ಮೂಲ ಹಾಗೂ 4 ಆಕ್ಸಿಲರಿ ಸೇರಿದಂತೆ ಒಟ್ಟು 65 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 72,840 ಮತದಾರರಿದ್ದಾರೆ. ಈ ಪೈಕಿ 54,321 ಪುರುಷರು ಮತ್ತು 18,519 ಮಹಿಳಾ ಮತದಾರರಿದ್ದಾರೆ.
ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ, ಯೂನಿವರ್ಸಲ್ ಸ್ಕೂಲ್, ಸತ್ತಿರಸ್ತೆ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ, ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು, ಗುಂಡ್ಲುಪೇಟೆ ಇಲ್ಲಿ ಮಸ್ಟರಿಂಗ್, ಡೀಮಸ್ಟರಿಂಗ್ ಮತ್ತು ಎಣಿಕೆ ಕಾರ್ಯವನ್ನು ನಡೆಸಲಾಗುತ್ತದೆ. ಮತಗಟ್ಟೆಗಳಿಗೆ ತಲಾ ಒಬ್ಬ ಅಧ್ಯಕ್ಷಾಧಿಕಾರಿ ಮತ್ತು 3 ಜನ ಪೋಲಿಂಗ್ ಅಧಿಕಾರಿಗಳನ್ನೊಳಗೊಂಡಂತೆ ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 600 ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 280 ಮತದಾನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಿಧಾನಸಭೆಗೆ ದಿಕ್ಸೂಚಿ ಎಂದೇ ಭಾವಿಸುತ್ತಿರುವ ಈ ಚುನಾವಣೆಯಲ್ಲಿ ಶತಾಯಗತಾಯ ಗದ್ದುಗೆ ಏರಲು ಕೈ-ಕಮಲ ಜಂಗೀ ಕುಸ್ತಿ ನಡೆಸಿವೆ. ಭೂ ಹಿಡುವಳಿದಾರರ ಮನೆ ಬಾಗಿಲಿಗೆ ಎರಡೆರೆಡು ಬಾರಿ ಎಡತಾಕಿ ಮತಯಾಚಿಸಲಾಗಿದೆ.
ಇದನ್ನೂ ಓದಿ: ಅಪಘಾತದಲ್ಲಿ ಪತಿ ಸಾವು: ದುಃಖ ತಾಳಲಾರದೆ ಮಗು ಕೊಂದು ಪತ್ನಿ ಆತ್ಮಹತ್ಯೆ