ಚಾಮರಾಜನಗರ: ವಿಪರೀತ ಮದ್ಯದ ನಶೆ ಏರಿಸಿಕೊಂಡಿದ್ದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ರಾಮಸ್ವಾಮಿ ಬಡಾವಣೆಯಲ್ಲಿ ನಡೆದಿದೆ. ಬಸವರಾಜು (45) ಮೃತ ದುರ್ದೈವಿ.
ಕುಡಿದು ಬಂದ ಬಸವರಾಜು ಪ್ರತಿದಿನ ಹೆಂಡತಿಗೆ ಕಿರುಕುಳ ನೀಡುತ್ತಿದ್ದನಂತೆ. ಈತನ ವರ್ತನೆಗೆ ಬೇಸತ್ತ ಸ್ಥಳೀಯರು, ಪೊಲೀಸರಿಗೆ ಮಾಹಿತಿ ರವಾನಿಸಿದ್ದರಂತೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಸವರಾಜುನನ್ನು ಮನೆಯ ಒಂದು ರೂಮಿನಲ್ಲಿರಿಸಿ ಬೆಳಗ್ಗೆ ವಿಚಾರಿಸುವುದಾಗಿ ತೆರಳಿದ್ದರು. ಇನ್ನು ಪತ್ನಿ ಮನೆಗೆ ಬೀಗ ಹಾಕಿಕೊಂಡು ಬೇರೆಡೆ ಮಲಗಿಕೊಂಡಿದ್ದು, ಬೆಳಿಗ್ಗೆ ಬಂದು ನೋಡಿದಾಗ ಪತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಅತಿಯಾದ ಮದ್ಯ ಸೇವನೆಯಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಆದರೆ, ಬಸವರಾಜು ತಂದೆ ತನ್ನ ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವುದಾಗಿ ಕೊಳ್ಳೇಗಾಲ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದ್ಯ, ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.