ಚಾಮರಾಜನಗರ: ವಿವಾಹಿತ ಮಹಿಳೆಯೊಬ್ಬರನ್ನು ವರ್ಷಗಳ ಕಾಲ ಪ್ರೀತಿಸಿ, ಎಲ್ಲೆಂದರಲ್ಲಿ ಸುತ್ತಾಡಿದ್ದಲ್ಲದೇ ಮದುವೆಯಾಗುವುದಾಗಿ ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದರೆನ್ನಲಾದ ಕಾನ್ಸ್ಟೇಬಲ್ವೋರ್ವರು ಈಗ ನಾಪತ್ತೆಯಾಗಿದ್ದಾರೆ. ತನ್ನನ್ನು ಮದುವೆ ಮಾಡಿಕೋ ಎಂದು ವಿವಾಹಿತೆ ಪಟ್ಟು ಹಿಡಿದಿದ್ದಕ್ಕೆ ಕಾನ್ಸ್‌ಟೇಬಲ್ ಮಹಿಳೆಯನ್ನು ಬಿಟ್ಟು ಪರಾರಿಯಾಗಿರುವ ಆರೋಪ ಪ್ರಕರಣ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಚಾಮರಾಜನಗರ ಪಟ್ಟಣ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಶಂಕರ್ ಎಂಬವರ ವಿರುದ್ಧ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 27 ವರ್ಷದ ವಿವಾಹಿತೆ ದೂರು ನೀಡಿದ್ದು, ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿ, ಮದುವೆ ಆಗು ಎಂದಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಅಳಲು ತೋಡಿಕೊಂಡು ದೂರು ಕೊಟ್ಟಿದ್ದಾರೆ.
ಏನಿದು ಲವ್ ಕಹಾನಿ: ವಿವಾಹಿತೆಗೆ ಈಗಾಗಲೇ ಎರಡು ಮಕ್ಕಳಿದ್ದು, ಕೌಟಂಬಿಕ ಕಲಹದಿಂದಾಗಿ ತವರು ಮನೆಗೆ ವಾಪಸಾಗಿದ್ದಾರೆ. ಈ ವೇಳೆ ಕಾನ್ಸ್‌ಟೇಬಲ್ ಶಂಕರ್ ಹಳೇ ಪರಿಚಯದಿಂದ ಮಾತುಕತೆ ಆಡುತ್ತ ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದರಂತೆ. ಬಳಿಕ ಕಳೆದ 1 ವರ್ಷದಿಂದ ಮಹಿಳೆಯ ಮೇಲೆ ಶಂಕರ್ ನಿರಂತರ ಅತ್ಯಾಚಾರ ಎಸಗಿದ್ದಾರಂತೆ. ಬಳಿಕ ವಿವಾಹಿತೆ ಮದುವೆ ಆಗು ಎಂದಿದ್ದಕ್ಕೆ ಕಾನ್ಸ್‌ಟೇಬಲ್ ನಿರಾಕರಿಸಿದ್ದಾರೆ.
ಈ ಸಂಬಂಧ ಪಂಚಾಯ್ತಿ, ಹಿರಿಯರ ನಡುವೆ ಮಾತುಕತೆಯೂ ಆಗಿದೆ. ಮದುವೆಗೆ ಕಾನ್ಸ್‌ಟೇಬಲ್ ಒಪ್ಪಿಲ್ಲ ಎಂದು ತಿಳಿದುಬಂದಿದೆ. ಕೊನೆಗೆ, ನ್ಯಾಯಕ್ಕಾಗಿ ವಿವಾಹಿತೆ ಯಳಂದೂರು ಠಾಣೆಗೆ ದೂರು ಕೊಟ್ಟಿದ್ದರಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಶಂಕರ್ ಪರಾರಿಯಾಗಿದ್ದಾರೆ. ಯಳಂದೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.