ಚಾಮರಾಜನಗರ: ಬೆಂಗಳೂರು ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಅಧಿಕಾರಿಗಳು ಹನೂರು ತಾಲೂಕಿನ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಈಟಿವಿ ಭಾರತಕ್ಕೆ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮಾಹಿತಿ ನೀಡಿದ್ದಾರೆ.
ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಹನೂರು ಭಾಗದ ನಾಲ್ವರನ್ನು ವಶಕ್ಕೆ ಪಡೆದಿದ್ದ ಎನ್ಸಿಬಿ ಅಧಿಕಾರಿಗಳು ಮೂವರನ್ನು ಬಿಟ್ಟು ಕಳುಹಿಸಿದ್ದು, ಒಬ್ಬಾತನನ್ನು ಅವರ ವಶದಲ್ಲೇ ಇರಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಹನೂರು, ಕೊಳ್ಳೇಗಾಲ ಹಾಗೂ ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯುತ್ತಿದ್ದು, 2018ರಲ್ಲಿ 46 ಪ್ರಕರಣ ದಾಖಲಾದರೆ ಈ ವರ್ಷ 20 ಪ್ರಕರಣಗಳನ್ನು ದಾಖಲಿಸಿ 140 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪೊಲೀಸರಿಗೆ ಗಾಂಜಾ ಪ್ರಕರಣಗಳ ಮೇಲೆ ಹೆಚ್ಚು ಗಮನ ಹರಿಸುವಂತೆ ಸೂಚಿಸಿದ್ದೇನೆ ಎಂದರು.
ಶೀಘ್ರ ಸಹಾಯವಾಣಿ
ಗಾಂಜಾ ವ್ಯಸನಿಗಳು ಹಾಗೂ ಬೆಳಗಾರರ ಬಗ್ಗೆ ಮಾಹಿತಿ ಕೊಡಲು ಮುಂದಿನ ವಾರದಿಂದಲೇ ಸಹಾಯವಾಣಿ ಪ್ರಾರಂಭಿಸಲಾಗುವುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿರಿಸಲಿದ್ದು ಗಾಂಜಾವನ್ನು ಜಿಲ್ಲೆಯಿಂದ ಕಿತ್ತೊಗೆಯಲು ಶ್ರಮಿಸಲಾಗುವುದು ಎಂದು ಎಸ್ಪಿ ತಿಳಿಸಿದರು.