ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ 52 ವರ್ಷದ ಹಳೆಯ ದಾಖಲೆಯನ್ನು ಸುಮಲತಾ ಅಂಬರೀಶ್ ಮುರಿದಿದ್ದಾರೆ.ರಾಜ್ಯದ ಇತಿಹಾಸದಲ್ಲೇ ಗೆದ್ದ ಮೊದಲ ಮಹಿಳಾ ಹಾಗೂ ಕರ್ನಾಟಕದಿಂದ ಇಲ್ಲಿಯವರೆಗೆ ಗೆದ್ದವರಲ್ಲಿ ಮೂರನೇ ಪಕ್ಷೇತರ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಪ್ರಭಾವಿ ವ್ಯಕ್ತಿಗಳಲ್ಲಿ ಮಂಡ್ಯದಲ್ಲಿ ನಟಿ ಸುಮಲತಾ, ಬೆಂಗಳೂರು ಕೇಂದ್ರದಲ್ಲಿ ನಟ ಪ್ರಕಾಶ್ ರೈ, ಬೆಂಗಳೂರು ದಕ್ಷಿಣದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಣದಲ್ಲಿದ್ದರು. ರಾಜ್ಯದ ಇತಿಹಾಸದಲ್ಲಿ 1951ರ ಈಚೆಗೆ ನಡೆದ ಒಟ್ಟು 16 ಲೋಕಸಭೆ ಚುನಾವಣೆಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ ಉದಾಹರಣೆ ಇದುವರೆಗೆ ಎರಡು ಬಾರಿ ಮಾತ್ರ. ಮೊದಲನೇಯದು 1957 ಮತ್ತು ಎರಡನೇಯದು 1967ರಲ್ಲಿ. ಈ ಸಾರಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಂಡ್ಯದಿಂದ ಕಣಕ್ಕಿಳಿದಿರುವ ನಟಿ ಸುಮಲತಾ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದು, 1967 ರ ನಂತರ ಗೆದ್ದ ಮೊದಲ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅವರು ಗೆಲುವು ದಾಖಲಿಸಿದ್ದರು.
ಈ ಸಾರಿ ಲೋಕಸಭೆ ಚುನಾವಣಾ ಅಖಾಡದಲ್ಲಿ ಒಟ್ಟು 265 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದು, ಅತೀ ಹೆಚ್ಚು ಮಂದಿ ಬೆಳಗಾವಿಯಲ್ಲಿ ಹಾಗೂ ಅತೀ ಕಡಿಮೆ ಮಂದಿ ಬಳ್ಳಾರಿ ಕ್ಷೇತ್ರದಲ್ಲಿದ್ದರು. ರಾಯಚೂರಿನಲ್ಲಿ ಯಾವೊಬ್ಬ ಅಭ್ಯರ್ಥಿಯೂ ಪಕ್ಷೇತರವಾಗಿ ಸ್ಪರ್ಧಿಸಿರಲಿಲ್ಲ. ಕ್ಷೇತ್ರವಾರು ಗಮನಿಸುತ್ತಾ ಹೋದರೆ ಚಿಕ್ಕೋಡಿಯಲ್ಲಿ 6, ಬೆಳಗಾವಿಯಲ್ಲಿ 52, ಬಾಗಲಕೋಟೆಯಲ್ಲಿ 4, ವಿಜಯಪುರದಲ್ಲಿ 5, ಕಲಬುರುಗಿಯಲ್ಲಿ 3, ಬೀದರ್ನಲ್ಲಿ 8, ಕೊಪ್ಪಳದಲ್ಲಿ 7, ಬಳ್ಳಾರಿಯಲ್ಲಿ 1, ಹಾವೇರಿಯಲ್ಲಿ 5, ಧಾರವಾಡದಲ್ಲಿ 10, ಉತ್ತರ ಕನ್ನಡದಲ್ಲಿ 6, ದಾವಣಗೆರೆಯಲ್ಲಿ 18, ಶಿವಮೊಗ್ಗದಲ್ಲಿ 7, ಉಡುಪಿ-ಚಿಕ್ಕಮಗಳೂರಲ್ಲಿ 4, ಹಾಸನದಲ್ಲಿ 2, ದಕ್ಷಿಣ ಕನ್ನಡದಲ್ಲಿ 7, ಚಿತ್ರದುರ್ಗದಲ್ಲಿ 12, ತುಮಕೂರಲ್ಲಿ 9, ಮಂಡ್ಯದಲ್ಲಿ 16, ಮೈಸೂರಲ್ಲಿ 15, ಚಾಮರಾಜನಗರದಲ್ಲಿ 4, ಬೆಂಗಳೂರು ಗ್ರಾಮಾಂತರದಲ್ಲಿ 6, ಬೆಂಗಳೂರು ಉತ್ತರದಲ್ಲಿ 20, ಬೆಂಗಳೂರು ಕೇಂದ್ರದಲ್ಲಿ 12, ಬೆಂಗಳೂರು ದಕ್ಷಿಣದಲ್ಲಿ 14, ಚಿಕ್ಕಬಳ್ಳಾಪುರದಲ್ಲಿ 6 ಹಾಗೂ ಕೋಲಾರದಲ್ಲಿ 6 ಮಂದಿ ಪಕ್ಷೇತರರು ಕಣದಲ್ಲಿದ್ದರು.
ಸುಮಲತಾರನ್ನು ಹೊರತುಪಡಿಸಿದರೆ, ರಾಜ್ಯದ ಯಾವುದೇ ಪಕ್ಷೇತರ ಅಭ್ಯರ್ಥಿ ಈ ಸಾರಿಯೂ ಹೇಳಿಕೊಳ್ಳುವಂತ ಸಾಧನೆ ತೋರಿಸಿಲ್ಲ. ರಾಜ್ಯದಲ್ಲಿ ಕಳೆದ ನಾಲ್ಕಾರು ಲೋಕಸಭೆ ಚುನಾವಣೆಗಳ ಇತಿಹಾಸ ಗಮನಿಸಿ ನೋಡಿದಾಗ, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಪಕ್ಷೇತರರು ಒಟ್ಟಾರೆ ಶೇ.10 ರಷ್ಟು ಮತ ಕೂಡ ಗಳಿಸಿಲ್ಲ. ನಿರೀಕ್ಷೆ ಮೂಡಿಸಿದ್ದ ಅಭ್ಯರ್ಥಿಗಳು ಸಹ ನಿರೀಕ್ಷಿತ ಮತ ಗಳಿಸಲಿಲ್ಲ.