ನವದೆಹಲಿ: ಆಹಾರ ಪದಾರ್ಥಗಳ ದರ ಏರಿಕೆಯಿಂದ ಕರ್ನಾಟಕದಲ್ಲಿ ಚಿಲ್ಲರೆ ಹಣದುಬ್ಬರವು ರಾಷ್ಟ್ರೀಯ ದರಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಗಿದೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ.
ದೇಶದ ಚಿಲ್ಲರೆ ಹಣದುಬ್ಬರ ಏರಿಕೆ ಮೇ ತಿಂಗಳಲ್ಲಿ ಶೇ. 3.05ಕ್ಕೆ ಏರಿಕೆಯಾಗಿದ್ದರೇ ರಾಜ್ಯದಲ್ಲಿ ಶೇ. 5.40 ರಷ್ಟಿದೆ. 'ಚಿಲ್ಲರೆ ಹಣದುಬ್ಬರವು ಆರ್ಥಿಕತೆ ಅಂಶಗಳಲ್ಲಿ ಪ್ರಮುಖವಾದುದು. ಏರುಗತಿಯಲ್ಲಿ ಸಾಗಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನ ಮುಖಿಯಾಗಲಿವೆ' ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತರೆ ರಾಜ್ಯಗಳಾದ ಕೇರಳ ಶೇ 5.37, ಜಮ್ಮು ಮತ್ತು ಕಾಶ್ಮೀರ ಶೇ 4.81, ಉತ್ತರಾಖಂಡ್ನಲ್ಲಿ ಶೇ. 4.56 ಮೂಲಕ ಅತಿಹೆಚ್ಚಿನ ಹಣದುಬ್ಬರ ದಾಖಲಾಗಿದೆ. ಕನಿಷ್ಠ ಮಟ್ಟದ ಸೂಚ್ಯಂಕ ಬಿಹಾರ್ ಶೇ. 0.22, ಹಿಮಾಚಲ ಪ್ರದೇಶ ಶೇ 0.58, ಆಂಧ್ರಪ್ರದೇಶ ಶೇ. 0.71 ಮತ್ತು ತೆಲಂಗಾಣ ಶೇ 1.50ರಷ್ಟರಲ್ಲಿ ಮುಂದುವರಿಯುತ್ತಿದೆ.
ಮೇನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಗೆ ತರಕಾರಿ, ಹಣ್ಣು, ಆರೋಗ್ಯ, ಶಿಕ್ಷಣದ ಪಾತ್ರವೇ ದೊಡ್ಡದು. ತರಕಾರಿ ಬೆಲೆಗಳು ಬಹುತೇಕ ದ್ವಿಗುಣಗೊಂಡಿವೆ.
ಪ್ರೋಟೀನ್ ಸಮೃದ್ಧ ಪದಾರ್ಥಗಳಾದ ಮೊಟ್ಟೆ, ಮಾಂಸ, ಮೀನು ಹಾಲು ಮತ್ತು ಈ ಸಂಬಂಧಿ ಉತ್ಪನ್ನಗಳ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.