ಬೆಂಗಳೂರು: ವಿಧಾನ ಸಭೆ ಅಧಿವೇಶನ ನಡೆಯುತ್ತಿರುವಾಗ ಆಡಳಿತ ಪಕ್ಷ ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡಲು ರಾಜ್ಯಪಾಲರಿಗೆ ಯಾವುದೇ ಅಧಿಕಾರ ಇರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ವಿ.ಎಸ್ ಉಗ್ರಪ್ಪ ರಾಜ್ಯಪಾಲರ ಗಡುವನ್ನು ಖಂಡಿಸಿದ್ದಾರೆ.
ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ1.30ರೊಳಗೆ ಬಹುಮತ ಸಾಬೀತುಪಡಸಲು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆದೇಶಿಸಿರುವುದು ಸಂವಿಧಾನ ವಿರೋಧಿ ತೀರ್ಮಾನ ಎಂದು ಉಗ್ರಪ್ಪ ಹೇಳಿದರು.
ಪಾರ್ಲಿಮೆಂಟ್ ಅಥವಾ ಅಸೆಂಬ್ಲಿಯಲ್ಲಿ ಯಾವುದೇ ಸದನ ನಡೆಯುತ್ತಿರುವಾಗ ಎಲ್ಲಾ ನಿರ್ಧಾರವನ್ನು ಸ್ಪೀಕರ್ ಮಾತ್ರ ತೆಗೆದುಕೊಳ್ಳಲು ಸಾಧ್ಯ. ಸುಪ್ರೀಂ ಕೋರ್ಟ್ಗೆ ಇಲ್ಲದ ಅಧಿಕಾರ ರಾಜ್ಯಪಾಲರಿಗೆ ನೀಡಿದವರಾರು ಎಂದು ಪ್ರಶ್ನಿಸಿದ ಅವರು, ರಾಜ್ಯಪಾಲರ ತೀರ್ಮಾನ ಅತ್ಯಂತ ದುರಾದೃಷ್ಟಕರವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.