ಬೀದರ್: ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ, ಗ್ರಾಮೀಣ ಭಾಗದಲ್ಲಿ ಕ್ವಾರೆಂಟೈನ್ ಮಾಡಲಾದ ವಲಸಿಗರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ವಾಸ್ತವವಾಗಿ ಏನೂ ನಡಿಯುತ್ತಿಲ್ಲ ಎಂದು ಜೆಡಿಎಸ್ ಉಪನಾಯಕ ಹಾಗೂ ಶಾಸಕ ಬಂಡೆಪ್ಪ ಕಾಶೆಂಪೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಉನ್ನತ ಸಭೆಯಲ್ಲಿ ಮಾತನಾಡಿದ ಅವರು, ನೆರೆ ರಾಜ್ಯಗಳಿಂದ ಬಂದ ವಲಸೆ ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ. ಆದರೆ, ಅಲ್ಲಿ ಅವರಿಗೆ ಸರಿಯಾದ ಊಟ ಸಿಗುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕ್ವಾರಂಟೈನ್ ಆದವರಿಗೆ ಬಿಸಿಯೂಟ, ಕೆಲವೊಂದು ಕಡೆ ಆಹಾರ ಧಾನ್ಯ ನೀಡಲಾಗುತ್ತಿದೆ. ಇದನ್ನು ಬಿಟ್ಟರೆ ಬೇರೆ ಏನು ದೊರೆಯುತ್ತಿಲ್ಲ ಎಂದಿದ್ದಾರೆ.
ಕ್ವಾರಂಟೈನ್ನಲ್ಲಿ ಇರುವವರು ಅವರ ಮನೆಯಿಂದಲೆ ಟಿಫಿನ್ ತರಿಸಿ ತಿನ್ನುತ್ತಿದ್ದಾರೆ. ನೀವು ಅವರಲ್ಲಿ ರೋಗ ನಿಯಂತ್ರಕ ಶಕ್ತಿ ಹೆಚ್ಚಿಸಲು ಚವನ್ ಪ್ರಾಷ್ ಕೊಡೋಣ ಅಂತಿರಾ. ಆದರೆ, ಪ್ರ್ಯಾಕ್ಟಿಕಲಿ ಏನು ದೊರೆಯದಂತಾಗಿದೆ ಎಂದು ಜಿಲ್ಲಾಡಳಿತದ ವಿರುದ್ಧ ಕಾಶೆಂಪೂರ್ ಅಸಮಾಧಾನ ಹೊರ ಹಾಕಿದರು.
ಸರ್ಕಾರ ಏನೆಲ್ಲ ಕೊಡಬೇಕು ಅಂತಿದೆ ಅದನ್ನೆಲ್ಲಾ ಕೊಡಲಿ ಎಂದು ಕಾಶೆಂಪೂರ ಹೇಳಿಕೆಗೆ ಮಧ್ಯ ಪ್ರವೇಶಿಸಿದ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್, ಡಿಸಿ ಸಾಹೇಬ್ರು ತಹಸೀಲ್ದಾರ್ ಗೆ ಹೇಳ್ತಾರೆ, ತಹಸೀಲ್ದಾರರು ಪಿಡಿಒಗಳಿಗೆ ಹೇಳ್ತಾರೆ, ಆದ್ರೆ ಅವರು ಯಾವ ಕೆಲಸವನ್ನೂ ಸಹ ಮಾಡೊಲ್ಲ ಇಷ್ಟೇ ಆಗಿದೆ ಎಂದು ಸಮರ್ಥಿಸಿದರು.
ಈ ನಡುವೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್, ಬೇರೆ ರಾಜ್ಯಗಳಿಂದ ಎಷ್ಟು ಜನ ಬರಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಕಳೆದೆರಡು ದಿನಗಳಿಂದ ಈ ಪದ್ದತಿ ಆರಂಭಿಸಿದ್ದೇವೆ. ಜಿಲ್ಲಾ ಪಂಚಾಯತ್ ಸಿಇಒ ಈ ಎಲ್ಲವುದರ ಮೇಲುಸ್ತುವಾರಿ ವಹಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮಾಧ್ಯಮಗಳಿಗೆ ನಿರ್ಬಂಧ:
ಕೋವಿಡ್-19 ವೈರಾಣು ನಿಯಂತ್ರಣ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಯೋಜನೆಗಳ ಕ್ರಿಯಾ ಯೋಜನೆ ಕುರಿತು ನಡೆದ ಸಭೆಯಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸಲಾಗಿತ್ತು. ಪತ್ರಕರ್ತರು ಸಭೆಗೆ ಪಾಲ್ಗೊಳ್ಳಲು ಸಭಾಂಗಣದ ಬಾಗಿಲಲ್ಲಿ ಬಂದು ನಿಂತಾಗ ಬೇಡ ಸ್ಥಳಾವಕಾಶದ ಕೊರತೆ ಇದೆ ಎಂದು ಸಬೂಬು ಹೇಳಿದ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಭೆಯ ಶೂಟಿಂಗ್ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಸದ ಭಗವಂತ ಖೂಬಾ, ಜಿ.ಪಂ ಅಧ್ಯಕ್ಷೆ ಗೀತಾ ಚಿದ್ರಿ, ಶಾಸಕರಾದ ಈಶ್ವರ ಖಂಡ್ರೆ, ಬಂಡೆಪ್ಪ ಕಾಶೆಂಪೂರ್, ರಾಜಶೇಖರ್ ಪಾಟೀಲ್, ರಹಿಂಖಾನ್, ಬಿ.ನಾರಾಯಣರಾವ್, ಪರಿಷತ್ ಸದಸ್ಯರಾದ ಅರವಿಂದ ಅರಳಿ, ವಿಜಯಸಿಂಗ್ ಹಾಗೂ ರಘುನಾಥರಾವ್ ಮಲ್ಕಾಪೂರೆ, ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.