ಬೀದರ್: ಬಡತನದಿಂದ ಬೆಳೆದ ಬಾಲಕಿ ತಾಂಡಾದಿಂದ 8 ಕಿ.ಮೀಟರ್ ದೂರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಶೇ.99.04 ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಜಿಲ್ಲೆಯ ಔರಾದ್ ತಾಲೂಕಿನ ಖೀಮಾ ನಾಯಕ್ ತಾಂಡಾದ ಅರುಣಾ ಎಂಬ ವಿದ್ಯಾರ್ಥಿನಿ ಔರಾದ್ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಎಸ್ಎಸ್ಎಲ್ಸಿ ಯಲ್ಲಿ ಜಿಲ್ಲೆಗೆ 3ನೇ ಸ್ಥಾನ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಶಾಲೆಯಿಂದ 8 ಕಿ. ಮೀಟರ್ ದೂರದ ತಾಂಡಾಕ್ಕೆ ಯಾವುದೇ ಬಸ್ಗಳಿಲ್ಲ. ಖಾಸಗಿ ವಾಹನಗಳಿದ್ದರೂ ಸಂಚರಿಸಲು ಪೋಷಕರ ಬಳಿ ಹಣ ಇರಲಿಲ್ಲ. ಹೀಗಾಗಿ ಕಾಲ್ನಡಿಗೆಯಲ್ಲೇ ಶಾಲೆಗೆ ಬಂದು ಕಷ್ಟಪಟ್ಟು ಓದಿದ್ದಾಳೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಶಾಲಾ ಪಾಠಗಳು ಕೂಡ ನಡೆಯಲಿಲ್ಲ,ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಓದಿ ಈ ಸಾಧನೆ ಮಾಡುವಲ್ಲಿ ಬಾಲಕಿ ಯಶಸ್ವಿಯಾಗಿದ್ದಾಳೆ.
ಔರಾದ್ ತಾಲೂಕಿನ ಎಸ್ಎಸ್ಎಲ್ಸಿ ಪರೀಕ್ಷೆಯ ಶೈಕ್ಷಣಿಕ ಇತಿಹಾಸದಲ್ಲೇ ಯಾರೂ ಪಡೆಯದ ಅಂಕಗಳು 619/625 ಅರುಣಾ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾಳೆ.
ಈ ವಿದ್ಯಾರ್ಥಿನಿ ಶಾಲೆಗೆ ಹೋಗುತ್ತಿದ್ದರೆ ಊರ ಜನರು ಅವಳನ್ನ ಶಾಲೆ ಬಿಡಿಸಿ ಕೂಲಿ ಕೆಲಸ ಮಾಡಿಸುವಂತೆ ಪೋಷಕರಿಗೆ ಸೂಚಿಸುತ್ತಿದ್ದರಂತೆ. ಅವಳೇನು ಓದಿ ಡಾಕ್ಟರ್ ಆಗುತ್ತಾಳಾ ಎಂದು ಗೇಲಿ ಮಾಡಿ ನಗುತ್ತಿದ್ದರಂತೆ. ಅದೇ ಜನರ ಮುಂದೆ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿನಿ ಅರುಣಾ ಉತ್ತರ ನೀಡಿದ್ದಾಳೆ ಎಂದು ವಿದ್ಯಾರ್ಥಿನಿಯ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಡಾಕ್ಟರ್ ಆಗುವ ಕನಸು: ಎಸ್ಎಸ್ಎಲ್ಸಿಯಲ್ಲಿ ಸಾಧನೆ ಮಾಡಿದ ಅರುಣಾ ನೀಟ್ ಪರೀಕ್ಷೆ ತಯಾರಿ ಮಾಡಿಕೊಂಡು ಎಂಎಸ್ ಸರ್ಜನ್( ಡಾಕ್ಟರ್) ಆಗಬೇಕು ಎಂದು ಕನಸು ಇಟ್ಟುಕೊಂಡಿದ್ದು, ಸಂಕಷ್ಟಗಳ ನಡುವೆ ಇರುವ ತಂದೆ ತಾಯಿಗೆ ಆಸರೆ ಆಗಬೇಕು ಎಂದು ಹೇಳಿಕೊಂಡಿದ್ದಾಳೆ.
ಅಂಭಿನಂದನೆಗಳ ಮಹಾಪೂರ: ಶಿಕ್ಷಣಕ್ಕೆ ಬಡತನ ಅಡ್ಡಿಯಾಗದೇ ನಿಷ್ಟೆಯಿಂದ ಅಕ್ಷರ ಜ್ಞಾನ ಪಡೆದು ಜಿಲ್ಲೆಯಲ್ಲೇ ಸಾಧನೆ ಮಾಡಿದ ತಾಂಡಾ ಹುಡುಗಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಔರಾದ್ ಪಟ್ಟಣದ ವಿವಿಧ ಸಂಘಟನೆಗಳು, ಸಾರ್ವಜನಿಕರು, ಶಿಕ್ಷಕರು ಸೇರಿದಂತೆ ಹಳೆ ವಿಧ್ಯಾರ್ಥಿಗಳು ಕೂಡ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ದಾಖಲು ಮಾಡಲು ಹಿಂದೇಟು ಹಾಕುವ ಪೋಷಕರಿಗೆ ಅರುಣಾ ಮಾಡಿದ ಸಾಧನೆ ಮಾದರಿಯಾಗಿದ್ದು, ಬಡತನ, ಹಸಿವು ಕಲಿಸಿದ ಪಾಠ ಹಾಗೂ ಹಠದಿಂದ ತಾಂಡಾ ಹುಡುಗಿ ಮಾಡಿದ ಈ ಸಾಧನೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.