ಬಸವಕಲ್ಯಾಣ (ಬೀದರ್): ಸರ್ಕಾರಿ ಸ್ವಾಮ್ಯದ ವಿದ್ಯುತ್ ಇಲಾಖೆಯನ್ನು ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಇಲ್ಲಿಯ ಜೆಸ್ಕಾಂ ನೌಕರರು ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.
ನಗರದ ಜೆಸ್ಕಾಂ ಕಚೇರಿ ಬಳಿ ಬೆಳಗ್ಗೆ ಕಚೇರಿ ಆರಂಭಕ್ಕೂ ಮುನ್ನ ಜಮಾಯಿಸಿದ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿ, ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲ ಕಾಲ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಖಾಸಗೀಕರಣಕ್ಕೆ ತೀವ್ರ ವಿರೊಧ ವ್ಯಕ್ತಪಡಿಸಿದರು.
ಖಾಸಗೀಕರಣದಿಂದಾಗಿ ಸಮಾಜದಲ್ಲಿನ ಬಡವರು, ರೈತರು ಸೇರಿದಂತೆ ಎಲ್ಲಾ ವರ್ಗದವರಿಗೂ ಇದು ಮಾರಕವಾಗಿದೆ. ಸರ್ಕಾರದಿಂದ ರೈತರಿಗೆ ಸಿಗುವ ಉಚಿತ ವಿದ್ಯುತ್ ಸರಬರಾಜು, ಭಾಗ್ಯ ಜ್ಯೋತಿ ಯೋಜನೆಗಳು ಸೇರಿದಂತೆ ಇತರ ರಿಯಾಯಿತಿ ಯೋಜನೆಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ಇಲಾಖೆಯ ನೌಕರರಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಹಿಂದೆ ಜೈ ಜವಾನ್, ಜೈ ಕಿಸಾನ್ ಎನ್ನಲಾಗುತಿತ್ತು. ಆದರೆ ಇಂದು ಜಾವೋ ಜವಾನ್, ಜಾವೋ ಕಿಸಾನ್ ಎನ್ನುವ ಘೋಷಣೆ ಅನುಷ್ಠಾನಕ್ಕೆ ಮುಂದಾದಂತೆ ಕಾಣುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.