ಬಸವಕಲ್ಯಾಣ: ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಗುರುವಾರ ನಗರದಲ್ಲಿ ಮತ್ತೆ ಇಬ್ಬರು ಸೇರಿದಂತೆ ತಾಲೂಕಿನಲ್ಲಿ ಹೊಸದಾಗಿ 13 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 121ಕ್ಕೆ ಏರಿದೆ.
ನಗರದ ಹೊಸಪೇಟ್ ಗಲ್ಲಿಯ 20 ವರ್ಷದ ಯುವಕ ಮತ್ತು ಕೈಕಾಡಿ ಗಲ್ಲಿಯ 30 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ತಾಲೂಕಿನ ರಾಜೇಶ್ವರನಲ್ಲಿ ಇಬ್ಬರು ಬಾಲಕಿಯರು ಹಾಗೂ ಓರ್ವ ಮಹಿಳೆ ಸೇರಿ 3 ಜನ, ಘಾಟಹಿಪ್ಪರಗಾ ತಾಂಡಾದಲ್ಲಿ ಇಬ್ಬರು ಬಾಲಕಿಯರು ಸೇರಿ 4 ಜನರಲ್ಲಿ ಹಾಗೂ ಕಿಟ್ಟಾದಲ್ಲಿ 4 ವರ್ಷದ ಬಾಲಕಿ ಸೇರಿ 3 ಜನರಲ್ಲಿ ಹಾಗೂ ಧನ್ನೂರ ವಾಡಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಗುರುವಾರ ಸೋಂಕು ಪತ್ತೆಯಾದವರಲ್ಲಿ ಬಹುತೇಕರಿಗೆ ಮಹಾರಾಷ್ಟ್ರದ ಲಿಂಕ್ ಇದ್ದು, ಹೊಸಪೇಟ್ ಗಲ್ಲಿಯ ಯುವಕ ನಗರ ಸೇರಿದಂತೆ ಮಹಾರಾಷ್ಟದ ಶಾಹಾಜಾನಿ ಔರಾದನಲ್ಲಿ ಸಂಚರಿಸಿದ್ದಾನೆ. ಈತನಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ.
ಮಾರ್ಚ್ನಲ್ಲಿ ದೆಹಲಿಯಿಂದ ಮರಳಿದ್ದ ವ್ಯಕ್ತಿಯೊಬ್ಬರಲ್ಲಿ ಏ. 2 ರಂದು ಸೋಂಕು ಪತ್ತೆಯಾಗಿತ್ತು. ನಂತರ ಇವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಎರಡು ದಿನದಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ತಾಲೂಕಿನಲ್ಲಿ ಇದುವರೆಗೆ ಸೋಂಕು ಪತ್ತೆಯಾದ 121 ಜನರ ಪೈಕಿ 33 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈಗ ನಗರದಲ್ಲಿ ಎರಡು ದಿನಗಳಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಇವರ ಸಂಪರ್ಕಕ್ಕೆ ಬಂದವರೆಷ್ಟು? ಸೋಂಕಿತರಿಂದ ಇನ್ನೆಷ್ಟು ಜನರಿಗೆ ಸೋಂಕು ಹರಡಿದೆ ಎನ್ನುವ ಭಯ ಜನರಿಗೆ ಕಾಡುತ್ತಿದೆ.