ಬೀದರ್ : ನನಗೆ ಕನ್ನಡ ಮಾತನಾಡಲು, ಓದಲು ಬರುವುದಿಲ್ಲ. ವ್ಯವಸ್ಥೆಯ ದೋಷದಿಂದಾಗಿ ನಾನು ಕನ್ನಡ ಕಲಿತಿಲ್ಲ. ಆದರೂ ನಾನು ಕನ್ನಡ ತಾಯಿಯ ಮಗ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ವೇದಿಕೆ ಮೇಲೆ ನೋವು ತೊಡಿಕೊಂಡರು.
ನಗರದ ಚನ್ನಬಸವ ಪಟ್ಟಣದ ರಂಗಮಂದಿರದಲ್ಲಿ ನಡೆಯುತ್ತಿರುವ 18ನೇಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾನು ಹುಟ್ಟಿದ್ದು ಘಮಸುಬಾಯಿ ತಾಂಡದಲ್ಲಿ, 1969 ರ ಅವಧಿಯಲ್ಲಿ ಔರಾದ್ ತಾಲೂಕಿನ ನಮ್ಮ ಹೂಟ್ಟೂರಿನ ಭಾಗದಲ್ಲಿ ಶಾಲೆಗಳೇ ಇರಲಿಲ್ಲ. ಮರಾಠಿ ಶಾಲೆಗಳಿದ್ದವು. ಮನೆಯಲ್ಲಿ ಲಂಬಾಣಿ ಭಾಷೆ. ಸುತ್ತಲೂ ಮರಾಠಿ ಭಾಷಾ ಪ್ರಭಾವ ಇತ್ತು. ಅಲ್ಲದೇ ಬಡತನದಿಂದ ಉದ್ಯೋಗ ಅರಸಿ ಮಹಾರಾಷ್ಟ್ರದ ಮುಂಬೈ ಮಹಾನಗರಕ್ಕೆ ಹೋಗಿದ್ದೆ. ಅಲ್ಲಿ ಹಿಂದಿ ಹೀಗೆ ಕನ್ನಡಿಗನಾದ್ರು ಅನ್ಯ ಭಾಷೆಯ ಪ್ರಭಾವ ನನ್ನ ಮೇಲೆ ಇರುವುದರಿಂದ ನನಗೆ ಕನ್ನಡ ಬಾರದಂತಾಗಿದೆ. ಎರಡು ಬಾರಿ ಶಾಸಕನಾದ್ರು ಕನ್ನಡ ಕಲಿಯಲು ಸಾಧ್ಯವಾಗಿಲ್ಲ. ನನ್ನಿಂದ ದೊಡ್ಡ ತಪ್ಪಾಗಿದೆ ಎಂದು ನೊಂದುಕೊಂಡರು.
ರಾಜ್ಯದ ಸಂಪುಟದಲ್ಲಿ ಸಚಿವನಾದ ಮೇಲೆ ಕನ್ನಡ ಕಲಿತ್ತಿದ್ದೀನಿ. ಎಲ್ಲರೂ ಕನ್ನಡ ಬರೋಲ್ಲ ಅಂತಾರೆ, ನಾನು ಮುಂಬೈದವನು ಅಂತಾರೆ, ಆದ್ರೆ ಕನ್ನಡ ಕಟ್ಟುವ ಕೆಲಸ ನಾನು ಮಾಡಿದ್ದೇನೆ. ನಾನು ಪಡುತ್ತಿರುವ ಕಷ್ಟ ಮುಂದಿನ ಪೀಳಿಗೆ ಅನುಭವಿಸಬಾರದೆಂದು ಗಡಿಯ ಪ್ರತಿಯೊಂದು ಗ್ರಾಮದಲ್ಲೂ ಕನ್ನಡ ಶಾಲೆ ಆರಂಭಿಸಿದ್ದೇನೆ. ವ್ಯವಸ್ಥೆಯ ನಿರ್ಲಕ್ಷ್ಯದ ಪರಿಣಾಮದಿಂದ ನಾನು ಕನ್ನಡ ಭಾಷೆಯಿಂದ ದೂರವಾದವನು. ಆದ್ರೆ ನನ್ನ ರಕ್ತದ ಕಣ ಕಣದಲ್ಲೂ ಕನ್ನಡಾಭಿಮಾನ ಇದೆ ಎಂದು ಕನ್ನಡದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು, ಹಾರಕೊಡ ಸಂಸ್ಥಾನದ ಚನ್ನವೀರ ಶಿವಾಚಾರ್ಯರು, ಸಮ್ಮೇಳನದ ಸರ್ವಾಧ್ಯಕ್ಷ ಸೋಮನಾಥ ಎಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.