ಬೀದರ್ : ಸಿಎಂ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದಲ್ಲಿ ಮಾಜಿ ಸಚಿವ ಔರಾದ್ ಶಾಸಕ ಪ್ರಭು ಚೌಹಾಣ್ ಮತ್ತೊಮ್ಮೆ ಸಚಿವ ಸ್ಥಾನಕ್ಕೇರ್ತಾರಾ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಮೂರು ಬಾರಿ ಶಾಸಕರಾಗಿರುವ ಪ್ರಭು ಚೌಹಾಣ್, ಬಿಜೆಪಿ ಹೈ ಕಮಾಂಡ್ ಆಶೀರ್ವಾದದಿಂದ ಕಳೆದ ಬಾರಿ ಸಚಿವರಾಗಿ ಪಶು ಸಂಗೋಪನಾ, ಅಲ್ಪ ಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ ಖಾತೆಯನ್ನು ನಿಭಾಯಿಸಿದ್ದರು. ಮಾಜಿ ಸಿಎಂ ಬಿಎಸ್‌ವೈ ರಾಜೀನಾಮೆಯಿಂದ ಸಂಪುಟ ವಿಸರ್ಜನೆಗೊಂಡು ಸಚಿವ ಸ್ಥಾನದಿಂದ ದೂರವಾಗಿದ್ದಾರೆ.
ಇದೀಗ ಹೊಸ ಸಂಪುಟದಲ್ಲಿ ಮತ್ತೆ ಬಿಜೆಪಿ ಹೈಕಮಾಂಡ್ ಪ್ರಭು ಚೌಹಾಣ್ ಅವರನ್ನು ಸಚಿವರನ್ನಾಗಿ ಮಾಡ್ತಾರೆ, ಲಂಬಾಣಿ ಸಮುದಾಯದ ಪ್ರಬಲ ಬೆಂಬಲವನ್ನು ಬೆನ್ನಿಗೆ ಇಟ್ಟುಕೊಂಡಿರುವ ಇವರನ್ನು ಹೈ ಕಮಾಂಡ್ ಕೈಬಿಡಲ್ಲ ಎಂಬ ಮಾತು ಕೇಳಿ ಬರ್ತಿವೆ.
ಸಚಿವರಾಗಿ ಮಾಡಿದ ಕಾರ್ಯಗಳೇ ಶ್ರೀ ರಕ್ಷೆ : ಪ್ರಭು ಚೌಹಾಣ್ ಅವರು ಎರಡು ವರ್ಷಗಳ ಕಾಲ ಬೀದರ್ ಹಾಗೂ ಯಾದಗಿರಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡಿದ್ದಾರೆ. ಪಶುಸಂಗೋಪನೆ ಇಲಾಖೆಗೆ ಹೊಸ ಆಯಾಮ ನೀಡಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರಲ್ಲದೇ ಪಶು ಸಂಜೀವಿನಿ ಯೋಜನೆ ಅಡಿಯಲ್ಲಿ ಪಶು ವೈದ್ಯಕೀಯ ಇಲಾಖೆಯನ್ನು ರೈತರ ಮನೆ ಬಾಗಿಲಿಗೆ ತಂದಿದ್ದಾರೆ.
ವಾರ್ ರೂಂ ಸ್ಥಾಪನೆ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ದೂರವಾಣಿ ಮೂಲಕವೇ ಪರಿಹರಿಸುವ ಪ್ರಯತ್ನ ಮಾಡಿದ್ದಾರೆ. ಎರಡು ವರ್ಷದ ಅವಧಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ, ಹೈಕಮಾಂಡ್ ಅವರ ಕಾರ್ಯವನ್ನು ಕೂಡ ಈ ಬಾರಿ ಸಂಪುಟ ರಚನೆ ವೇಳೆಯಲ್ಲಿ ಪರಿಗಣಿಸಲಿದೆ ಎಂದು ಮುಖಂಡ ಬಂಡೆಪ್ಪ ಕಂಟೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಘ ಪರಿವಾರದ ಗ್ರೀನ್ ಸಿಗ್ನಲ್ : ಬಿಜೆಪಿ ಪಕ್ಷದಲ್ಲಿ ಅಷ್ಟೇ ಅಲ್ಲ ಸಂಘ ಪರಿವಾರದಲ್ಲೂ ಪ್ರಭು ಚೌಹಾಣ್ ಹೊಂದಾಣಿಕೆ ಇಟ್ಟಕೊಂಡಿದ್ದರ ಪರಿಣಾಮ ಈಗಾಗಲೇ ಬಿ ಎಲ್ ಸಂತೋಷ್ ಅವರು ಗ್ರೀನ್ ಸಿಗ್ನಲ್ ಪಡೆಯುವಲ್ಲಿ ಪ್ರಭು ಚೌಹಾಣ್ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಕೇಂದ್ರದಲ್ಲಿ ಭಗವಂತ ಖೂಬಾ ಸಾಥ್ : ಪ್ರಭು ಚೌಹಾಣ್‌ರಿಗೆ ಕೇಂದ್ರ ನಾಯಕರ ಮನ ಗೆಲ್ಲುವಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಪಾತ್ರ ಇದೆ. ಪ್ರಲ್ಹಾದ್ ಜೋಶಿ, ರಾಜೀವ ಚಂದ್ರಶೇಖರ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಭು ಚೌಹಾಣ್‌ರಿಗೆ ಸಚಿವ ಸ್ಥಾನ ನೀಡಬೇಕೆಂಬ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಾದೇಶಿಕವಾರು, ಜಿಲ್ಲೆವಾರು ಲೆಕ್ಕಾಚಾರದಲ್ಲೂ ಪ್ಲಸ್ ಪಾಯಿಂಟ್ : ಪ್ರಾದೇಶಿಕವಾರು ಸಂಪುಟ ವಿಸ್ತರಣೆಗೆ ಮಾನ್ಯತೆ ನೀಡಿದಲ್ಲಿ ಬೀದರ್ ಜಿಲ್ಲೆಯ ಇಬ್ಬರು ಶಾಸಕರ ಪೈಕಿ ಪ್ರಭು ಚೌಹಾಣ್ ಮುಂಚೂಣಿಯಲ್ಲಿದ್ದಾರೆ. ಕಲಬುರಗಿ ವಿಭಾಗದಲ್ಲಿ ಯಾದಗಿರಿಗೆ ವಾಲ್ಮೀಕಿ ಸಮುದಾಯದ ಸುರಪುರ ಶಾಸಕ ರಾಜುಗೌಡ, ಕಲಬುರಗಿ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅಥವಾ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ಸಂಪುಟಕ್ಕೆ ಸೇರಿಸಿದ್ರೆ, ಬೀದರ್ ಜಿಲ್ಲೆಗೆ ಪ್ರಭು ಚೌಹಾಣ್ ಪಾಲಿಗೆ ಸಚಿವ ಸ್ಥಾನ ಒಲಿದು ಬರಲಿದೆ ಎಂಬ ಲೆಕ್ಕಾಚಾರವಿದೆ.
ಪ್ರಭು ಚೌಹಾಣ್ ಪರ ಮಹಾರಾಷ್ಟ್ರ ನಾಯಕರ ಬ್ಯಾಟಿಂಗ್ : ಪ್ರಭು ಚೌಹಾಣ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಜೋರಾಗಿದೆ. ಜಿಲ್ಲೆಯಾದ್ಯಂತ ಅಭಿಮಾನಿಗಳು ಪೂಜೆ, ಪುನಸ್ಕಾರ ಮಾಡ್ತಿದ್ದಾರೆ. ವಿವಿಧ ಸಮುದಾಯದವರು, ಸಂಘ-ಸಂಸ್ಥೆಗಳು ಸಚಿವ ಸ್ಥಾನ ನೀಡಬೇಕು ಎಂದು ಒತ್ತಡ ಹಾಕ್ತಿದ್ದಾರೆ.
ಅಲ್ಲದೆ ಮಹಾರಾಷ್ಟ್ರದ ರಾಜಕೀಯದಲ್ಲಿ ಪ್ರಬಲವಾದ ನಂಟು ಇಟ್ಟುಕೊಂಡಿರುವ ಚೌಹಾಣ್ ಅವರ ಪರವಾಗಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಮಾಜಿ ಸಚಿವೆ ಪಂಕಜಾ ಮುಂಡೆ ಸೇರಿ ಹಲವು ಮಹಾರಾಷ್ಟ್ರದ ನಾಯಕರು ಜೆ ಪಿ ನಡ್ಡಾ, ಅಮಿತ್ ಶಾ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪಿ.ರಾಜುಗೆ ಸಚಿವ ಸ್ಥಾನ ನೀಡಿದ್ರೆ ಚೌಹಾಣ್ ಸಂಪುಟ ಸೇರ್ಪಡೆ ಅನುಮಾನ : ಕುಡುಚಿ ಶಾಸಕ ಪಿ ರಾಜೀವ್ ಲಂಬಾಣಿ ಸಮುದಾಯಕ್ಕೆ ಸೇರಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ನೀಡಿದ್ರೆ, ಪ್ರಭು ಚೌಹಾಣ್ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗ್ತಿದೆ.
ಹಳಬರಿಗೆ ಕೊಕ್ ಕೊಟ್ಟರೂ ಕೊಡಬಹುದು : ಈಗಾಗಲೇ ಸಚಿವರಾಗಿ ಕಲಸ ಮಾಡಿದವರನ್ನು ಹೊಸ ಸಂಪುಟದಲ್ಲಿ ಸೇರಿಸುವುದು ಬೇಡ ಎಂಬ ಲೆಕ್ಕಾಚಾರಕ್ಕೆ ಬಂದ್ರೆ, ಪ್ರಭು ಚೌಹಾಣ್ ಅವರಿಗೆ ಸಚಿವ ಸ್ಥಾನ ಕೈತಪ್ಪಲಿದೆ. ವಲಸಿಗರೂ ಸೇರಿದಂತೆ ಹೊಸ ಮುಖಗಳಿಗೆ ಮಣೆ ಹಾಕಿದಲ್ಲಿ ಚೌಹಾಣ್ ಸಚಿವರಾಗುವುದು ಅನುಮಾನ ಎನ್ನಲಾಗ್ತಿದೆ. ಸಂಪುಟ ರಚನೆಯಲ್ಲಿ ಮಂತ್ರಿ ಕುರ್ಚಿ ಮತ್ತೆ ಸಿಗುತ್ತೋ, ಹೈಕಮಾಂಡ್ ಸುಮ್ಮನಿರುವಂತೆ ಹೇಳಿ ಸಮಾಧಾನ ಮಾಡುತ್ತೋ ಕಾದು ನೋಡಬೇಕು.